ಶಿವಮೊಗ್ಗ ನಗರದ ಮೆಗ್ಗಾನ್ ಜಿಲ್ಲಾ ಭೋಧನಾ ಆಸ್ಪತ್ರೆಯ ಆಡಳಿತ ವಿಭಾಗದ ಕ್ಲರ್ಕ್ ನೀಲಕಂಠೇಗೌಡ ಬಿನ್ ತಿಮ್ಮೇಗೌಡ ಅವರು ಅಂಗವೈಕಲ್ಯ ಪ್ರಮಾಣ ಪತ್ರ ನೀಡುವ ನೆಪದಲ್ಲಿ 1,500 ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರಿಂದ ಬಲೆ ಬೀಸಿ ಸಿಕ್ಕಿಬಿದ್ದಿದ್ದಾರೆ.

ಲೋಕಾಯುಕ್ತ ಪ್ರಕಟಣೆಯ ಪ್ರಕಾರ, ಸಾಗರ ತಾಲ್ಲೂಕಿನ ಅಂದಾಸುರ ಗ್ರಾಮದ ನಾಗರಾಜ ಕೆ. (ಬಿನ್ ಲೇಟ್ ಕೆಂಚಪ್ಪ) ಅವರ 8 ವರ್ಷದ ಮಗಳು ಭೂವಿಲಾ ಎನ್. ಅಂಗವೈಕಲ್ಯದಿಂದ ಬಳಲುತ್ತಿದ್ದು, ಸರ್ಕಾರಿ ಸೌಲಭ್ಯ ಹಾಗೂ ವಿದ್ಯಾಭ್ಯಾಸಕ್ಕಾಗಿ ಅಂಗವೈಕಲ್ಯ ಪ್ರಮಾಣ ಪತ್ರ ಪಡೆಯಲು ಸುಮಾರು 15-20 ದಿನಗಳ ಹಿಂದೆ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಅಲ್ಲಿ ಕ್ಲರ್ಕ್ ನೀಲಕಂಠೇಗೌಡ ಅವರನ್ನು ಸಂಪರ್ಕಿಸಿದಾಗ, ವೈದ್ಯರಿಂದ ತಪಾಸಣೆ ಮಾಡಿ ಸಹಿ ಪಡೆದು ಅರ್ಜಿ ಸಲ್ಲಿಸಲು ತಿಳಿಸಿದ್ದರು.

ನಾಗರಾಜರು ಸೂಚನೆ ಪ್ರಕಾರ ವೈದ್ಯಕೀಯ ಪರಿಶೀಲನೆ ಪೂರ್ಣಗೊಳಿಸಿ, ಅಗತ್ಯ ಫಾರ್ಮ್‌ಗಳು ಮತ್ತು ದಾಖಲೆಗಳನ್ನು ಸಲ್ಲಿಸಿದರು. ನಂತರ ಪ್ರಮಾಣ ಪತ್ರ ಸಿದ್ಧವಾಗಿದೆ ಎಂದು ಕೇಳಿದಾಗ, ಕ್ಲರ್ಕ್ ನೀಲಕಂಠೇಗೌಡ ಅವರು ಪ್ರಮಾಣ ಪತ್ರಕ್ಕಾಗಿ 1,500 ರೂಪಾಯಿ ಲಂಚ ಬೇಡಿಕೆ ಇಟ್ಟಿದ್ದಾರೆ. ಈ ಸಂಭಾಷಣೆಯನ್ನು ನಾಗರಾಜರು ಮೊಬೈಲ್‌ನಲ್ಲಿ ಧ್ವನಿಮುದ್ರ ಮಾಡಿಕೊಂಡು, ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದರು.

ದೂರು ಆಧಾರದಲ್ಲಿ, 12 ಆಗಸ್ಟ್ 2025ರಂದು ಮಧ್ಯಾಹ್ನ 3.30ಕ್ಕೆ ಮೆಗ್ಗಾನ್ ಆಸ್ಪತ್ರೆಯ ಆಡಳಿತ ಕಚೇರಿಯಲ್ಲೇ ಲಂಚದ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಬಲೆ ಬೀಸಿದರು. ನಗದು ಹಣವನ್ನು ಜಪ್ತಿ ಮಾಡಲಾಗಿದ್ದು, ನೀಲಕಂಠೇಗೌಡ ಅವರನ್ನು ವಶಕ್ಕೆ ಪಡೆದು, ಭ್ರಷ್ಟಾಚಾರ ನಿರೋಧಕ ಕಾಯಿದೆ-1988 (ತಿದ್ದುಪಡಿ ಕಾಯಿದೆ-2018) ಸೆಕ್ಷನ್ 7(3) ಅಡಿ ಪ್ರಕರಣ ದಾಖಲಿಸಲಾಗಿದೆ.

ಈ ಟ್ರ್ಯಾಪ್ ಕಾರ್ಯಾಚರಣೆಯನ್ನು ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯ ಎಸ್‌ಪಿ ಮಂಜುನಾಥ ಚೌಧರಿ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಬಿ.ಪಿ. ಚಂದ್ರಶೇಖರ್ ನೇತೃತ್ವದಲ್ಲಿ, ಇನ್ಸ್‌ಪೆಕ್ಟರ್ ವೀರಬಸಪ್ಪ ಎಲ್. ಕುಸಲಾಪುರ ಹಾಗೂ ಸಿಬ್ಬಂದಿ ರುದ್ರೇಶ್ ಕೆ.ಪಿ., ಗುರುರಾಜ ಎನ್. ಮೈಲಾರ್, ಯೋಗೇಶ್ ಜಿ.ಸಿ., ಮಂಜುನಾಥ ಎಂ., ಟೀಕಪ್ಪ, ಬಿ.ಟಿ. ಚನ್ನೇಶ್, ಪ್ರಶಾಂತ್ ಕುಮಾರ್, ಪ್ರಕಾಶ್ ಬಾರಿಮರದ, ಅರುಣ್ ಕುಮಾರ್, ಆದರ್ಶ, ಅಂಜಲಿ, ಚಂದ್ರಿಬಾಯಿ, ಪ್ರದೀಪ, ತರುಣ್, ಗಂಗಾಧರ, ಆನಂದ, ಶ್ರೀ ಗೋಪಿ ಮತ್ತಿತರರ ಸಹಯೋಗದಲ್ಲಿ ಯಶಸ್ವಿಯಾಗಿ ನೆರವೇರಿಸಲಾಯಿತು.

ಈ ಪ್ರಕರಣ ಸಂಬಂಧ ನೀಲಕಂಠೇಗೌಡರ ವಿರುದ್ಧ ಮುಂದಿನ ತನಿಖೆ ಸಾಗುತ್ತಿದೆ.

Related News

error: Content is protected !!