
ಬೆಂಗಳೂರು ಗ್ರಾಮಾಂತರ: ತಾಯಿತ ಕಟ್ಟುವ ಹೆಸರಿನಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬ ಆರೋಪ ಬೆಳಕಿಗೆ ಬಂದಿದೆ. ಈ ಘಟನೆ ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸೋಂಪುರದ ಕೂತಘಟ್ಟ ಗ್ರಾಮದಲ್ಲಿ ನಡೆದಿದೆ.
ತುಮಕೂರು ಮೂಲದ ಯುವತಿ, ವೈವಾಹಿಕ ಜೀವನದಲ್ಲಿ ಎದುರಾದ ಸಂಕಷ್ಟಗಳಿಂದ ಹೊರಬರಲು ಧಾರ್ಮಿಕ ಸಲಹೆಗಾಗಿ ಮೌಲ್ವಿಯೊಬ್ಬರನ್ನು ಸಂಪರ್ಕಿಸಿದ್ದಳು. ತಾಯಿತ ಕಟ್ಟಿಸುವ ಮೂಲಕ ಸಮಸ್ಯೆ ಪರಿಹಾರವಾಗುತ್ತದೆ ಎಂಬ ಭರವಸೆಯೊಂದಿಗೆ ಮೌಲ್ವಿ ಭದ್ರೆ ಆಲಂ ಅವರು ಯುವತಿಯನ್ನು ತಮ್ಮ ನಿವಾಸಕ್ಕೆ ಕರೆಯಿಸಿಕೊಂಡಿದ್ದಾರೆ.
ಆದರೆ, ಆಕೆಯ ನಂಬಿಕೆಗೆ ಧಕ್ಕೆ ನೀಡುವಂತೆ, ಮನೆಯೊಳಗಿನ ಕೊಠಡಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ನಡೆದ ಕೆಲವು ದಿನಗಳ ಬಳಿಕ ಮಹಿಳೆ ಧೈರ್ಯ ಹೆಚ್ಚಿಸಿಕೊಂಡು ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.
ಸದ್ಯ, ಪೊಲೀಸರು ಆರೋಪಿ ಭದ್ರೆ ಆಲಂ ಬಂಧನಕ್ಕೆ ಬಲೆ ಬೀಸಿದ್ದು, ತನಿಖೆ ಮುಂದುವರಿದಿದೆ. ಈ ಘಟನೆ ಹಿನ್ನೆಲೆ, ತಂತ್ರ, ತಾಯಿತ ಮುಂತಾದ ಹೆಸರಿನಲ್ಲಿ ಮಹಿಳೆಯರು ಕಿರುಕುಳಕ್ಕೆ ಗುರಿಯಾಗುವ ಪ್ರಕ್ರಿಯೆ ಬಗ್ಗೆ ಗಂಭೀರ ಚಿಂತೆ ವ್ಯಕ್ತವಾಗಿದೆ.