ಮಧ್ಯಪ್ರದೇಶದ ಸಿಯೋನಿಯಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ದೇವಾಲಯ ನವೀಕರಣ ಕಾಮಗಾರಿ ಸಂದರ್ಭ ಸ್ವಯಂಸೇವಕ ಕೆಲಸ ಮಾಡುವ ನೆಪದಲ್ಲಿ ಫೋಟೋಗೆ ಪೋಸ್ ನೀಡುತ್ತಿದ್ದ ವೈದ್ಯರೊಬ್ಬರು ಹಠಾತ್‌ ಆರು ಅಡಿ ಆಳದ ಹೊಂಡಕ್ಕೆ ಬಿದ್ದ ಘಟನೆ ಈಗ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ.

ಘಟನೆ ಸಿಯೋನಿಯ ಚಿತ್ರಗುಪ್ತ ದೇವಸ್ಥಾನದಲ್ಲಿ ನಡೆದಿದೆ. ನವೀಕರಣ ಕಾರ್ಯ ನಡೆಯುತ್ತಿದ್ದ ಈ ದೇವಸ್ಥಾನಕ್ಕೆ ಚಿತ್ರಗುಪ್ತ ದೇವಾಲಯ ನವೀಕರಣ ಸಮಿತಿಯ ಅಧ್ಯಕ್ಷ ಡಾ. ಪ್ರಫುಲ್ ಶ್ರೀವಾಸ್ತವ ಭೇಟಿ ನೀಡಿದ್ದರು. ತಮ್ಮ ಸೇವೆಯನ್ನು ವೀಕ್ಷಣೆಯಾಗಿ ದಾಖಲಿಸಿಕೊಳ್ಳಲು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಅವರು ಫೋಟೋ ಮತ್ತು ವೀಡಿಯೊ ತೆಗೆಸಿಕೊಳ್ಳುತ್ತಿದ್ದರು.

ಅವರೇ ಬೇರೆಯವರಿಗೆ “ಫೋಟೋ ಸರಿಯಾಗಿ ಬರಲಿಲ್ಲ, ಇನ್ನೊಮ್ಮೆ ತೆಗೆ” ಎಂಬ ಹೇಳಿಕೆಯನ್ನು ನೀಡುತ್ತಿರುವ ವಿಡಿಯೋದಲ್ಲಿ ಕಾಣಬಹುದು. ಇದೇ ವೇಳೆ ಅವರು ಸಿಮೆಂಟ್ ಸುರಿಯುತ್ತಿರುವಂತೆ ಪೋಸ್ ನೀಡುತ್ತಿದ್ದಾಗ ಅವರು ನಿಂತಿದ್ದ ಸ್ಲಾಬ್ ಏಕಾಏಕಿ ಕುಸಿದು ಹೋಗುತ್ತದೆ. ಪರಿಣಾಮವಾಗಿ ಅವರು ಆರು ಅಡಿ ಆಳದ ಹೊಂಡಕ್ಕೆ ಬಿದ್ದು ಹೋಗುತ್ತಾರೆ.

ಈ ಅಪಘಾತದಲ್ಲಿ ಅವರಿಗೆ ಕೇವಲ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಗಂಭೀರ ಸ್ಥಿತಿ ಉಂಟಾಗಿಲ್ಲ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಈ ಅಪರೂಪದ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿ ಈಗ ಭಾರೀ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

error: Content is protected !!