ಕುಮಟಾ, ಜುಲೈ 12 – ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ರಾಮತೀರ್ಥದ ದಟ್ಟ ಅರಣ್ಯ ಪ್ರದೇಶದಲ್ಲಿ ಎರಡು ಪುಟ್ಟ ಮಕ್ಕಳೊಂದಿಗೆ ಗುಹೆಯೊಂದರಲ್ಲಿ ವಾಸಿಸುತ್ತಿದ್ದ ರಷ್ಯಾ ಮೂಲದ ಮಹಿಳೆಯೊಬ್ಬರನ್ನು ಗೋಕರ್ಣ ಪೊಲೀಸರು ಪತ್ತೆಹಚ್ಚಿ ರಕ್ಷಿಸಿದ್ದಾರೆ. ಇದೀಗ ಅವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಮುಂದಿನ ಕ್ರಮಕ್ಕಾಗಿ ರಷ್ಯಾ ರಾಯಭಾರ ಕಚೇರಿಯನ್ನು ಸಂಪರ್ಕಿಸಲಾಗಿದೆ.

ಮೋಹಿ (40) ಎಂಬ ಈ ಮಹಿಳೆ, ತನ್ನ ಮಕ್ಕಳು ಪ್ರೆಯಾ (6) ಮತ್ತು ಅಮಾ (4)ರೊಂದಿಗೆ ಗುಹೆಯಲ್ಲೇ ವಾಸವಿದ್ದು, ದಿನಗಳನ್ನು ಧ್ಯಾನ, ಪೂಜಾ ಮತ್ತು ಪ್ರಾಕೃತಿಕ ಜೀವನದಲ್ಲಿ ತೊಡಗಿಸಿಕೊಂಡಿದ್ದಳು. ಮೂಲತಃ ಬಿಸಿನೆಸ್ ವೀಸಾದಡಿ ರಷ್ಯಾದಿಂದ ಭಾರತಕ್ಕೆ ಬಂದಿದ್ದ ಈಕೆ, ಮೊದಲಿಗೆ ಗೋವಾಕ್ಕೆ ಆಗಮಿಸಿದ್ದು, ನಂತರ ಗೋಕರ್ಣದ ರಾಮತೀರ್ಥದ ಹತ್ತಿರದ ಒಂದು ಗುಹೆಯಲ್ಲಿ ನೆಲೆಸಿದ್ದರು.

ಸಂಪೂರ್ಣ ಆಂತರಿಕವಾದ ಜೀವನವೊಂದರೊಂದಿಗೆ ಈಕೆ ಗುಹೆಯಲ್ಲಿ ದಿನ ಕಳೆಯುತ್ತಿದ್ದ ಸಂದರ್ಭದಲ್ಲಿ, ಗೋಕರ್ಣ ಪೊಲೀಸ್ ಠಾಣೆಯ ಸಿಪಿಐ ಶ್ರೀಧರ್ ನೇತೃತ್ವದ ತಂಡ ಈ ಭಾಗದಲ್ಲಿ ನಡೆದ ಗುಡ್ಡ ಕುಸಿತದ ಹಿನ್ನೆಲೆಯಲ್ಲೇ ಗಸ್ತು ತಿರುಗುತ್ತಾ ಈ ಅಪರೂಪದ ಪರಿಸ್ಥಿತಿಯನ್ನು ಪತ್ತೆಹಚ್ಚಿದರು. ತಕ್ಷಣವೇ ಮಹಿಳೆ ಮತ್ತು ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.

ಅವರ ಇಚ್ಛೆಯಂತೆ, ಅವರನ್ನು ಬಂಕಿಕೊಡ್ಲದ ಯೋಗ ರತ್ನ ಸರಸ್ವತಿ ಸ್ವಾಮೀಜಿ ಅವರ ಆಶ್ರಮಕ್ಕೆ ಕರೆದೊಯ್ಯಲಾಯಿತು. ಸಮಾಲೋಚನೆಯ ವೇಳೆ ಮೋಹಿ ಹಿಂದೂ ಧರ್ಮದ ಆಧ್ಯಾತ್ಮ, ಧ್ಯಾನ ಹಾಗೂ ಪ್ರಕೃತಿ ಜೀವನದ ಬಗ್ಗೆ ಅಪಾರ ಆಸಕ್ತಿ ಹೊಂದಿರುವುದು ತಿಳಿದುಬಂದಿದೆ. ಈ ಕಾರಣದಿಂದಲೇ ಅವರು ಸಾಮಾಜಿಕ ಜೀವನದಿಂದ ದೂರವಾಗಿ ಗುಹೆಯಲ್ಲಿ ವಾಸಿಸುತ್ತಿದ್ದರು.

ಈ ಅಪರೂಪದ ಮತ್ತು ಭದ್ರತೆಯ ಗಮನಸೆಳೆದ ಘಟನೆಯ ಕುರಿತು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ್ ತಿಳಿಸಿದ್ದಾರೆ. ಇದೀಗ ಮಹಿಳೆ ಹಾಗೂ ಮಕ್ಕಳನ್ನು ಅಧಿಕಾರಿಗಳ ನಿಯಂತ್ರಣದಲ್ಲಿ ಬೆಂಗಳೂರಿಗೆ ಕಳಿಸಲಾಗಿದ್ದು, ರಷ್ಯಾ ರಾಯಭಾರ ಕಚೇರಿಯ ಸಹಕಾರದಿಂದ ಅವರನ್ನು ಅವರ ಸ್ವದೇಶಕ್ಕೆ ಹಿಂತಿರುಗಿಸಲು ಕ್ರಮ ಜರುಗಿಸಲಾಗುತ್ತಿದೆ.

error: Content is protected !!