ಮೈಸೂರು: ನಕಲಿ ದಾಖಲೆಗಳ ಆಧಾರದಲ್ಲಿ ನೋಂದಣಿ ಮಾಡಿಕೊಂಡು ತೆರಿಗೆ ವಂಚನೆ ಮಾಡುತ್ತಿದ್ದ ದುಬಾರಿ ಕಾರುಗಳ ಮೇಲೆ ಸಾರಿಗೆ ಇಲಾಖೆಯ ಅಧಿಕಾರಿಗಳು ಮೈಸೂರಿನಲ್ಲಿ ಬೃಹತ್ ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಒಟ್ಟು ₹14.95 ಕೋಟಿಗೂ ಅಧಿಕ ಮೌಲ್ಯದ ಐಷಾರಾಮಿ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ವಾಹನ ಮಾಲಕರಿಂದ ₹3.02 ಕೋಟಿ ರೂ. ದಂಡವನ್ನು ವಸೂಲಿ ಮಾಡಲಾಗಿದೆ.

ಬೃಹತ್ ಕಾರ್ಯಾಚರಣೆಯನ್ನು ಬೆಂಗಳೂರು ಕೇಂದ್ರದ ಅಪರ ಸಾರಿಗೆ ಆಯುಕ್ತ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ನಡೆಸಲಾಯಿತು. ಮೈಸೂರು ನಗರದ ವಿವಿಧ ಸ್ಥಳಗಳಲ್ಲಿ ತೆರಿಗೆ ಪಾವತಿ ತಪ್ಪಿಸಿ ಸಂಚರಿಸುತ್ತಿದ್ದ ರೋಲ್ಸ್ ರಾಯ್ಸ್ ಕುಲಿನನ್, ಎರಡು ಮರ್ಸಿಡಿಸ್ ಕಾರುಗಳು, ಪೋರ್ಷೆ ಕೇಮನ್ ಮತ್ತು ಆಡಿ ಎ4 ಕಾರುಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಅಕ್ರಮ ನೋಂದಣಿ ಮತ್ತು ರಾಜ್ಯ ಸರ್ಕಾರದ ತೆರಿಗೆ ಬಾಕಿಗೆ ಸಂಬಂಧಿಸಿದ ಗುಪ್ತ ಮಾಹಿತಿ ಆಧಾರದ ಮೇಲೆ ಈ ದಾಳಿ ನಡೆಯಿತು. ಮೋಟಾರು ವಾಹನ ಕಾಯ್ದೆಯ ಉಲ್ಲಂಘನೆಯಾಗಿ ಪರಿಗಣಿಸಿರುವ ಅಧಿಕಾರಿಗಳು, ಸಂಬಂಧಪಟ್ಟ ವಾಹನ ಮಾಲಕರಿಗೆ ನಿಯಮಬದ್ಧವಾಗಿ ದಂಡ ವಿಧಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಬೆಂಗಳೂರು ದಕ್ಷಿಣದ ಹಿರಿಯ ಮೋಟಾರು ನಿರೀಕ್ಷಕ ಎನ್. ರಂಜಿತ್, ಆರ್‌ಟಿಒ 55ರ ಹಿರಿಯ ನಿರೀಕ್ಷಕ ಇಮ್ತಿಯಾಝ್ ಪಾಷ, ಪಶ್ಚಿಮ ವಿಭಾಗದ ಮೋಟಾರು ನಿರೀಕ್ಷಕ ವಿಜಯ್ ಕುಮಾರ್, ವಲಯ 9ರ ಆರ್‌ಟಿಒ ರಾಮಚಂದ್ರ ಹಾಗೂ ಮೋಟಾರು ನಿರೀಕ್ಷಕ ಅಲಿ ಉದ್ದೀನ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಇಂತಹ ಆರ್‌ಟಿಒ ದಾಳಿಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣವಾಗಿ ನಡೆಯಲಿದ್ದು, ತೆರಿಗೆ ವಂಚನೆಗೆ ತಿರುಗು ಬಾಣವಾಗಲಿವೆ ಎಂಬುದು ಅಧಿಕಾರಿಗಳ ಎಚ್ಚರಿಕೆ.

Related News

error: Content is protected !!