ಯಲ್ಲಾಪುರ (ರಾಮನಗರ): ಹದಿನಾರು ಗಂಭೀರ ಪ್ರಕರಣಗಳಲ್ಲಿ ಅಂತರಜಿಲ್ಲಾ ರೌಡಿಶೀಟರ್ ಪ್ರವೀಣ್ ಮನೋಹರ್ ಸುಧೀರ್ (37) ಎಂಬಾತನನ್ನು ಯಲ್ಲಾಪುರದ ಅರಣ್ಯ ಪ್ರದೇಶದಲ್ಲಿ ಪೋಲೀಸರು ಫೈರಿಂಗ್ ನಡೆಸಿ ಬಂಧಿಸಿರುವ ಘಟನೆ ಸೋಮವಾರ ನಡೆದಿದೆ.

ಯಲ್ಲಾಪುರ–ಹಳಿಯಾಳ ರಾಜ್ಯ ಹೆದ್ದಾರಿಯ ಸಮೀಪದ ಕಣ್ಣಿಗೇರಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಪ್ರವೀಣ್ ಅಡಗಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು, ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಆರೋಪಿಯು ಪೋಲೀಸರನ್ನು ಕಂಡು ಚಾಕು ಮತ್ತು ಕಲ್ಲುಗಳಿಂದ ಪಿಎಸ್‌ಐ ಮಹಾಂತೇಶ ನಾಯಕ ಹಾಗೂ ಸಿಬ್ಬಂದಿಗಳ ಮೇಲೆ ದಾಳಿ ಮಾಡಿದ ಎಂದು ತಿಳಿದುಬಂದಿದೆ.

ಆತ್ಮರಕ್ಷಣೆಗೆ ಫೈರಿಂಗ್ ನಡೆಸಿದ ಪಿಎಸ್‌ಐ ಮಹಾಂತೇಶ ನಾಯಕ, ಮೊದಲು ಗಾಳಿಯಲ್ಲಿ ಎರಡು ಸುತ್ತು ಹಾರಿಸಿ ಎಚ್ಚರಿಕೆ ನೀಡಿದರೂ, ಆರೋಪಿ ಹಿಂಜರಿಯದೇ ದಾಳಿ ಮುಂದುವರೆಸಿದ್ದ ಹಿನ್ನೆಲೆಯಲ್ಲಿ ಆತನ ಬಲಗಾಲಿನ ಮಂಡಿಯ ಕೆಳಭಾಗಕ್ಕೆ ಗುಂಡು ಹಾರಿಸಿ ಕಬಳಿಸಲಾಗಿದೆ. ಗಾಯಗೊಂಡಿರುವ ಪ್ರವೀಣ್‌ನನ್ನು ತಕ್ಷಣ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಪಿಎಸ್‌ಐ ಮಹಾಂತೇಶ ನಾಯಕ ಸೇರಿದಂತೆ ಕೆಲವು ಪೊಲೀಸ್ ಸಿಬ್ಬಂದಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅವರೂ ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಂಧಿತನ ವಿರುದ್ಧ ರಾಮನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ, ಸುಲಿಗೆ, ಮಹಿಳೆಯರ ಮೇಲಿನ ದೌರ್ಜನ್ಯ ಜಾತಿ ನಿಂದನೆ, ಕರ್ತವ್ಯಕ್ಕೆ ಅಡ್ಡಿಪಡಿಸುವಂತಹ ಒಟ್ಟು 16ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕಾರ್ಯಾಚರಣೆಯನ್ನು ದಾಂಡೇಲಿ ಉಪ ವಿಭಾಗದ ಡಿವೈಎಸ್‌ಪಿ ಶಿವಾನಂದ ಮದರಖಂಡಿ ಅವರ ಮಾರ್ಗದರ್ಶನದಲ್ಲಿ, ಜೋಯಿಡಾದ ಸಿಪಿಐ ಚಂದ್ರಶೇಖರ ಹರಿಹರ ಹಾಗೂ ಪಿಎಸ್‌ಐ ಮಹಾಂತೇಶ ನಾಯಕ ನೇತೃತ್ವದಲ್ಲಿ ತಂಡವೊಂದು ಯಶಸ್ವಿಯಾಗಿ ಮುನ್ನಡೆಸಿದೆ.

ಘಟನೆಯ ಬಳಿಕ ಜಿಲ್ಲೆ ಎಸ್‌ಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಆರಂಭಿಸಲಾಗಿದೆ. ವರದಿ: ಮಂಜುನಾಥ ಎಫ್ ಎಚ್

Related News

error: Content is protected !!