
ಚಿತ್ರದುರ್ಗ: ಹೊಸಕೆರೆ ಸಮೀಪದ ಹಳ್ಳದ ಬಳಿ ಕಾರಿನಲ್ಲಿ ಕುಳಿತು ದರೋಡೆ ಯತ್ನಕ್ಕೆ ಸಿದ್ಧತೆ ಮಾಡಿಕೊಂಡಿದ್ದ ಶಂಕಿತ ತಂಡವೊಂದನ್ನು ಸಿರಿಗೆರೆ ಪೊಲೀಸರು ಮಂಗಳವಾರ ಸಂಜೆ ವಶಕ್ಕೆ ಪಡೆದು ಮಹತ್ವದ ಸಾಧನೆ ಮಾಡಿದ್ದಾರೆ.
ಗ್ರಾಮಸ್ಥರಿಂದ ದೊರಕಿದ ಖಚಿತ ಮಾಹಿತಿಯ ಮೇಲೆ ಕ್ರಮ ಕೈಗೊಂಡ ಪೊಲೀಸರು, ಶಂಕಿತರು ದರೋಡೆಗೆ ಬಳಸುತ್ತಿದ್ದ ಕಾರು ಹಾಗೂ ಅದರೊಳಗೆ ಇದ್ದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಕಾರಿನಲ್ಲಿ ಕಾರದ ಪುಡಿಯೂ ಪತ್ತೆಯಾಗಿದೆ.
ಬಂಧಿತರು ಐವರಿದ್ದ ತಂಡದ ಸದಸ್ಯರಾಗಿದ್ದು, ಅವರಲ್ಲಿ ಮೂವರು ಪೊಲೀಸರ ಕೈಗೆ ಬಿದ್ದರೆ, ಇನ್ನು ಇಬ್ಬರು ದೌಡಾಯಿಸಿದ್ದಾರೆ. ಪೊಲೀಸರು ಇವರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಈ ತಂಡವು ಸುತ್ತಮುತ್ತಲಿನ ಪ್ರದೇಶದ ಪ್ರಮುಖ ಅಡಿಕೆ ವ್ಯಾಪಾರಿಯೊಬ್ಬರು ನಗದು ಹಣವನ್ನು ಸಾಗಿಸುತ್ತಿರುವ ಮಾಹಿತಿ ಹೊಂದಿದ್ದಾಗಿ ತಿಳಿದು ಬಂದಿದೆ. ಈ ನಗದನ್ನು ದರೋಡೆಗೊಳಿಸುವ ಉದ್ದೇಶದಿಂದವೇ ಆರೋಪಿಗಳು ಕಾರ್ಯಚರಣೆ ರೂಪಿಸಿದ್ದರು ಎನ್ನಲಾಗಿದೆ.
ಚೌಕಸತೆಯಿಂದ ಪ್ಲ್ಯಾನ್ ರೂಪಿಸಿದ್ದ ಆರೋಪಿಗಳು, ತಮ್ಮ ಕಾರಿನ ಮುಂಭಾಗದ ನಂಬರ್ ಪ್ಲೇಟಿಗೆ ಕೆಸರು ಮೆತ್ತಿದ್ದರೆ, ಹಿಂಭಾಗದ ನಂಬರ್ ಪ್ಲೇಟಿಗೆ ಸ್ಟಿಕರ್ ಅಂಟಿಸಿ ಗುರುತಿಸದಂತೆ ಜಾಗ್ರತೆಯಿಂದ ಕಾರ್ಯಾಚರಣೆ ನಡೆಸಿದ್ದರು.
ಘಟನೆಯ ನಂತರ ಸಿರಿಗೆರೆ ಠಾಣೆಗೆ ಭೇಟಿ ನೀಡಿದ ಚಿತ್ರದುರ್ಗ ಡಿವೈಎಸ್‌ಪಿ ದಿನಕರ್, ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆದು ತನಿಖೆಗೆ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ FIR ದಾಖಲಿಸಲಾಗಿದ್ದು, ಉಳಿದ ಆರೋಪಿಗಳ ಬಂಧನಕ್ಕೆ ಚುರುಕು ಕ್ರಮ ಕೈಗೊಳ್ಳಲಾಗಿದೆ.