ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಯಲಿಹಡಲಗಿ–ಅಡಹಳಟ್ಟಿ ಸಂಪರ್ಕ ರಸ್ತೆ ಸಂಪೂರ್ಣ ಹದಗೆಟ್ಟು, ತೆಗ್ಗು-ಗುಂಡಿಗಳಿಂದ ತುಂಬಿಕೊಂಡಿದೆ. ರಸ್ತೆಯ ದುಸ್ಥಿತಿಯಿಂದ ಬೈಕ್ ಸವಾರರು ಮತ್ತು ವಾಹನ ಚಾಲಕರು ಸಂಚರಿಸಲು ಭಾರೀ ಕಷ್ಟ ಅನುಭವಿಸುತ್ತಿದ್ದಾರೆ.
ಚುನಾವಣೆ ವೇಳೆ ಅಭಿವೃದ್ಧಿಯ ಭರವಸೆ ನೀಡುವ ರಾಜಕಾರಣಿಗಳು, ಬಳಿಕ ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬ ಆಕ್ರೋಶವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಪ್ಯಾಚ್ ವರ್ಕ್ ಸಹ ಮಾಡದೇ ರಸ್ತೆಯನ್ನು ಬಿಟ್ಟುಬಿಟ್ಟಿರುವುದರಿಂದ, ಪ್ರತಿದಿನ ಪ್ರಯಾಣಿಸುವವರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ.
ಅಥಣಿ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಇದೇ ರೀತಿಯ ರಸ್ತೆ ಸಮಸ್ಯೆ ಕಂಡುಬರುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
