
ಬಳ್ಳಾರಿ: ಜಿಲ್ಲೆಯಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ, ಕೆಲ ಗ್ರಾಮಗಳಲ್ಲಿ ಜೂನ್ 27ರಿಂದ ಜುಲೈ 7ರವರೆಗೆ ಮೊಹರಂ ಹಬ್ಬದ ಆಚರಣೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜಿಲ್ಲಾಧಿಕಾರಿ ಡಾ. ಪ್ರಶಾಂತಕುಮಾರ್ ಮಿಶ್ರಾ ಅವರು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ.
ಪ್ರಶಾಸನದ ಮಾಹಿತಿಯಂತೆ, ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಶಾಂತಿಯುತ ಪರಿಸ್ಥಿತಿಗೆ ಧಕ್ಕೆಯಾಗುವ ಸಾಧ್ಯತೆಗಳಿರುವ ಬಗ್ಗೆ ಪೂರ್ವಾನುಮಾನವಿದ್ದು, ಮುಂಜಾಗೃತ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಾರ್ವಜನಿಕ ಭದ್ರತೆ ಹಾಗೂ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಬಂದೋಬಸ್ತ್ ಪರಿಣಾಮಕಾರಿಯಾಗಿ ಜಾರಿಗೆ ತರುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ ಪೊಲೀಸ್ ಕಾಯ್ದೆ 1963ರ ಸೆಕ್ಷನ್ 35(ಎ), (ಬಿ), (ಡಿ), (ಇ) ಅಡಿಯಲ್ಲಿ ಈ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ನಿಷೇಧಾವಧಿಯಂದು ನಿಷಿದ್ಧ ಪ್ರದೇಶಗಳಲ್ಲಿ ಯಾವುದೇ ಮೆರವಣಿಗೆಗಳು, ಸಾರ್ವಜನಿಕ ಸಭೆಗಳು, ಹಾಗೂ ಪಂಜಾ ಪ್ರತಿಷ್ಠಾಪನೆಗಳು ಅಥವಾ ಇತರ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಅವಕಾಶ ಇರುವುದಿಲ್ಲ.
ನಿಷೇಧಾಜ್ಞೆ ಜಾರಿಯಲ್ಲಿರುವ ಪ್ರದೇಶಗಳು ಈ ಕೆಳಕಂಡಂತಿವೆ:
ಗಾಂಧಿನಗರ ಪೊಲೀಸ್ ಠಾಣೆ ವ್ಯಾಪ್ತಿ: ತಾಳೂರು ರಸ್ತೆ, ಕನ್ನಡ ನಗರ ಮುಖ್ಯ ರಸ್ತೆ, ನ್ಯಾಯಾಧೀಶರ ವಸತಿಗೃಹದ ಬಳಿ ಇರುವ ಮಹಾನಂದಿಕೊಟ್ಟ ಪ್ರದೇಶ.
ಸಿರುಗುಪ್ಪ ಪೊಲೀಸ್ ಠಾಣೆ ವ್ಯಾಪ್ತಿ: ಕೆ. ಸೂಗೂರು, ಮುದೇನೂರು, ಹೀರೆಹಾಳ್, ನಾಡಂಗ, ಬಂಡ್ರಾಳ್, ದೇಶನೂರು, ಕೆ. ಬೆಳಗಲ್, ಅಲಬನೂರು.
ತೆಕ್ಕಲಕೋಟೆ ಠಾಣೆ ವ್ಯಾಪ್ತಿ: ತೆಕ್ಕಲಕೋಟೆ, ಹಳೇಕೋಟೆ, ಉಪ್ಪಾರಹೊಸಳ್ಳಿ, ಉಡೇಗೋಳ, ಅರಳಿಗನೂರು.
ಸಿರಿಗೇರಿ ಠಾಣೆ ವ್ಯಾಪ್ತಿ: ಸಿರಿಗೇರಿ, ಕೂರಿಗನೂರು, ತಾಳೂರು, ಕರೂರು.
ಪಿಡಿ ಹಳ್ಳಿ ಠಾಣೆ ವ್ಯಾಪ್ತಿ: ಅಸುಂಡಿ ಗ್ರಾಮ.
ಕಂಪ್ಲಿ ಪೊಲೀಸ್ ಠಾಣೆ ವ್ಯಾಪ್ತಿ: ನಂ.15-ಗೋನಾಳು ಗ್ರಾಮ.
ಈ ನಿಷೇಧಾಜ್ಞೆ ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿದ್ದು, ಸಾರ್ವಜನಿಕರು ಸಹಕಾರ ನೀಡುವಂತೆ ಮನವಿ ಮಾಡಲಾಗಿದೆ.