ಚಾಮರಾಜನಗರ: ನಗರಸಭೆಯ ಆರೋಗ್ಯ ಮತ್ತು ಪರಿಸರ ಇಲಾಖೆಯ ಅಧಿಕಾರಿಗಳು ನಗರದಲ್ಲಿ ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ಬಳಸುತ್ತಿರುವ ಅಂಗಡಿಗಳ ವಿರುದ್ಧ ತೀವ್ರ ಕ್ರಮ ಕೈಗೊಂಡಿದ್ದಾರೆ. ನಗರದ ದೊಡ್ಡಂಗಡಿ ಬೀದಿ, ರಥ ಬೀದಿ, ಮಾರಿಗುಡಿ ಹಾಗೂ ಚಿಕ್ಕಂಗಡಿ ಬೀದಿಗಳಲ್ಲಿರುವ ದಿನಸಿ ಅಂಗಡಿ, ಬೇಕರಿ, ತಳ್ಳುಗಾಡಿ ವ್ಯಾಪಾರಸ್ಥರು, ಹೂವಿನ ಸ್ಟಾಲ್ ಹಾಗೂ ಇತರ ಮಳಿಗೆಗಳ ಮೇಲೆ ದಾಳಿ ನಡೆಸಲಾಯಿತು.
ಈ ವೇಳೆ ಅಧಿಕಾರಿಗಳು ಸುಮಾರು 15 ಕೆ.ಜಿ.ಷ್ಟು ಪ್ಲಾಸ್ಟಿಕ್ ಕವರ್ ಹಾಗೂ ಲೋಟಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ಲಾಸ್ಟಿಕ್ ಬಳಕೆ ಮಾಡಿದ 10 ಅಂಗಡಿಗಳ ಮಾಲೀಕರಿಗೆ ತಲಾ ₹500ರಂತೆ ದಂಡ ವಿಧಿಸಲಾಗಿದೆ. ನಿಷೇಧಿತ ಪ್ಲಾಸ್ಟಿಕ್ ಸರಕಿಗೆ ಕಡಿವಾಣ ಹಾಕುವ ಉದ್ದೇಶದಿಂದ ಈ ತಪಾಸಣೆ ನಡೆಸಲಾಗಿದೆ.
ಇದೇ ವೇಳೆ ದಿನಸಿ ಅಂಗಡಿಗಳು, ಪಾಸ್ಟ್ಫುಡ್ ಸೆಂಟರ್ಗಳು, ವೈನ್ ಶಾಪ್ಗಳು ಸೇರಿದಂತೆ ಅನೇಕ ವಾಣಿಜ್ಯ ಸಂಸ್ಥೆಗಳಿಗೆ ಭೇಟಿ ನೀಡಿದ ಅಧಿಕಾರಿಗಳು, ಏಕಬಳಕೆ ಪ್ಲಾಸ್ಟಿಕ್ ಬಳಕೆ ವಿರುದ್ಧ ಜಾಗೃತಿ ಮೂಡಿಸಿದರು.
ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ್ ಅವರ ನೇತೃತ್ವದಲ್ಲಿ ಈ ದಾಳಿ ನಡೆಯಿತು. ಆರೋಗ್ಯ ಇಲಾಖೆಯ ಸಿಬ್ಬಂದಿಯಾದ ಮಣಿಕಂಠ, ಚೇತನ್, ನಿತಿನ್, ಗೌತಮ್, ರವಿಕುಮಾರ್ ಹಾಗೂ ರಿತಿಕ್ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಪರಿಸರ ಸ್ನೇಹಿ ಪರ್ಯಾಯ ವಸ್ತುಗಳನ್ನು ಬಳಸಬೇಕು ಎಂಬ ಸಲಹೆಯನ್ನು ಅಧಿಕಾರಿಗಳು ಈ ಸಂದರ್ಭದಲ್ಲಿ ನೀಡಿದರು.
