
ಬೆಂಗಳೂರು: ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಚಾರಣಾಧೀನ ಖೈದಿ ಇಂದು ಮುಂಜಾನೆ ಆಸ್ಪತ್ರೆಯಿಂದ ಪರಾರಿಯಾದ ಘಟನೆ ಭಾರೀ ಸಂಚಲನ ಮೂಡಿಸಿದೆ. ದರೋಡೆ ಪ್ರಕರಣದಲ್ಲಿ ಬಂಧಿತನಾಗಿದ್ದ ಚಂದ್ರಶೇಖರ್ ಎಂಬ ಖೈದಿ, ವೈದ್ಯಕೀಯ ಕಾರಣದಿಂದ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಪಲಾಯನಗೈದಿದ್ದಾನೆ.
ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಬಂಧಿತನಾಗಿದ್ದ ಚಂದ್ರಶೇಖರ್, ಎದೆನೋವಿನ ಕಾರಣದಿಂದ ಮೇ 2ರಂದು ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಕೇರ್ ಸೆಂಟರ್ ಗೆ ದಾಖಲೆಯಾದ. ಆದರೆ, ಇಂದು ಬೆಳಗ್ಗೆ ಸುಮಾರು 5:30ರ ಸುಮಾರಿಗೆ ಆತ ಆಸ್ಪತ್ರೆಯಿಂದ ಪರಾರಿಯಾದರೆಂಬ ಮಾಹಿತಿ ಹೊರಬಿದ್ದಿದೆ.
ಘಟನೆಯ ಬಳಿಕ VV ಪುರಂ ಠಾಣೆಯ ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ. ಆಸ್ಪತ್ರೆಯ ಆಡಳಿತ ಮಂಡಳಿ ಮತ್ತು ವೈದ್ಯರೊಂದಿಗೆ ಮಾತುಕತೆ ನಡೆಸಿದ ಪೊಲೀಸರು, ಭದ್ರತಾ ವ್ಯವಸ್ಥೆಯಲ್ಲಿ ಉಂಟಾದ ಕೊರತೆಯ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ.
ಸದ್ಯಕ್ಕೆ ಚಂದ್ರಶೇಖರ್ ಪತ್ತೆಯಾಗಿಲ್ಲ. ಆತ ಎಲ್ಲಿಗೆ ಹೋಗಿದ್ದಾನೆ ಎಂಬುದು ಇನ್ನೂ ಅಜ್ಞಾತವಾಗಿದ್ದು, ಪೊಲೀಸರ ತಂಡಗಳು ಆತನ ಶೋಧ ಕಾರ್ಯದಲ್ಲಿ ತೊಡಗಿಕೊಂಡಿವೆ. ಈ ಘಟನೆಯು ಪೊಲೀಸರ ಭದ್ರತಾ ವ್ಯವಸ್ಥೆ ಹಾಗೂ ಕೈದಿಗಳ ಮೇಲಿನ ನಿಗಾವಿನ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿದೆ.