
ಚಾಮರಾಜನಗರ, ಜುಲೈ 28: ಅಧಿಕಾರದ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಉದ್ಯಮಿಯೊಬ್ಬರ ಬಳಿ ಹಣೆ ಹಾಕಿ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿದ ಘಟನೆ ಚಾಮರಾಜನಗರದಲ್ಲಿ ಬೆಳಕಿಗೆ ಬಂದಿದೆ. ಸೈಬರ್ ಕ್ರೈಂ ಠಾಣೆಯ ಪಿಎಸ್‌ಐ ಅಯ್ಯನಗೌಡ ಸೇರಿದಂತೆ ಆರು ಮಂದಿ ಪೊಲೀಸರ ವಿರುದ್ಧ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ತಮಿಳುನಾಡು ಮೂಲದ ಉದ್ಯಮಿ ಸಚ್ಚಿದಾನಂದ ಮೂರ್ತಿ ಎಂಬುವವರು ಈ ಪ್ರಕರಣದ ಹಿನ್ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಆರೋಪಿಗಳಾದ ಸೈಯದ್ ಅನ್ಸಾರಿ ಮತ್ತು ಇಮ್ರಾನ್ ಅವರು ಈ ಉದ್ಯಮಿಗೆ ಕರೆಮಾಡಿ, “3 ಲಕ್ಷ ರೂಪಾಯಿ ಹೂಡಿಕೆಯಿಂದ ಒಂದು ತಿಂಗಳಲ್ಲಿ ಡಬ್ಬಲ್ ಮಾಡಿಸಬಹುದು” ಎಂದು ನಂಬಿಸಿ, ಜುಲೈ 26ರಂದು ಚಾಮರಾಜನಗರದ ಡೆಲ್ಲಿ ದರ್ಬಾರ್ ಹೋಟೆಲಿಗೆ ಕರೆಸಿದ್ದಾರೆ.
ಅನ್ಸಾರಿ ಹಾಗೂ ಇಮ್ರಾನ್ ಈ ಮಾಹಿತಿ ಸೈಬರ್ ಕ್ರೈಂ ಠಾಣೆಯ ಪಿಎಸ್‌ಐ ಅಯ್ಯನಗೌಡಗೆ ನೀಡಿದ್ದು, ತಕ್ಷಣವೇ ಅಯ್ಯನಗೌಡ ಅವರು ತಮಗೆ ಸಾಥ್ ನೀಡಿದ ಪೇದೆಗಳು – ಮೋಹನ್, ಮಹೇಶ್, ಬಸವಣ್ಣ, ರಮೇಶ್ ಅವರನ್ನು ಕರೆದುಕೊಂಡು ಡೆಲ್ಲಿ ದರ್ಬಾರ್ ಹೋಟೆಲ್‌ಗೆ ದಾಳಿ ಮಾಡಿದ್ದಾರೆ.
ಉದ್ಯಮಿಗೆ “ಇದು ಫ್ರಾಡ್ ಹೂಡಿಕೆ” ಎಂದು ಆರೋಪಿಸಿ, “ಮೇಲೆ ಕೇಸ್ ಹೋಯಿತಂದ್ರೆ ತಪ್ಪಿಸಲು ನಾಲ್ಕು ಲಕ್ಷ ಕೊಡು” ಎಂದು ಬೆದರಿಕೆ ಹಾಕಿದ್ದಾರೆ. ಹಣ ನೀಡಲು ಒಪ್ಪಿಕೊಳ್ಳದ ಸಚ್ಚಿದಾನಂದ ಅವರ ಬಳಿ ಇದ್ದ 3 ಲಕ್ಷ ರೂಪಾಯಿಗಳನ್ನು ಪಡೆದುಕೊಂಡು, ಜೊತೆಗೆ ಫೋನ್ ಪೇ ಮೂಲಕ 70 ಸಾವಿರ ರೂಪಾಯಿಗಳನ್ನು ಅನ್ಸಾರಿ ಖಾತೆಗೆ ಹಾಕಿಸಿಕೊಂಡಿದ್ದಾರೆ.
ಈ ಹಿನ್ನಲೆಯಲ್ಲಿ ಸಚ್ಚಿದಾನಂದ ಮೂರ್ತಿ ಅವರು ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನಿಖೆ ಆರಂಭಿಸಿದ ಪೊಲೀಸರು ಅನ್ಸಾರಿ ಮತ್ತು ಇಮ್ರಾನ್ ಅವರನ್ನು ಬಂಧಿಸಿದ್ದಾರೆ. ಆದರೆ ಪ್ರಕರಣದ ಪ್ರಮುಖ ಆರೋಪಿಗಳಾದ ಪಿಎಸ್‌ಐ ಅಯ್ಯನಗೌಡ ಹಾಗೂ ಪೇದೆಗಳು – ಮೋಹನ್, ಬಸವಣ್ಣ, ರಮೇಶ್ ಪರಾರಿಯಾಗಿದ್ದಾರೆ.
ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಅವರು ಆರೋಪಿ ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡುವ ಆದೇಶ ಹೊರಡಿಸಿದ್ದಾರೆ. ಇದೀಗ ಪರಾರಿಯಾಗಿರುವ ಪೊಲೀಸ್ ಅಧಿಕಾರಿಗಳಿಗಾಗಿ ವಿಶೇಷ ತಂಡ ರಚಿಸಲಾಗಿದ್ದು, ಶೀಘ್ರದಲ್ಲೇ ಬಂಧಿಸಲು ಹುಡುಕಾಟ ಮುಂದುವರಿಸಲಾಗಿದೆ.