ಕುಂದಾಪುರ: ಇಲ್ಲಿನ ಸಂತೆ ಮಾರುಕಟ್ಟೆ ಬಳಿ ಜುಲೈ 14ರ ಮಧ್ಯರಾತ್ರಿ ನಡೆದ ಅಂಗಡಿ ಕಳ್ಳತನ ಪ್ರಕರಣವನ್ನು ಕುಂದಾಪುರ ಪೊಲೀಸರು ಯಶಸ್ವಿಯಾಗಿ ಭೇದಿಸಿ, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಲಕ್ಷಾಂತರ ಮೌಲ್ಯದ ವಸ್ತುಗಳು ಮತ್ತು ಕೃತ್ಯಕ್ಕೆ ಬಳಸಲಾಗಿದ್ದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಮಧ್ಯರಾತ್ರಿ 2.30ರ ಸುಮಾರಿಗೆ ಅಂಗಡಿಯ ಶಟರ್ ಬೀಗ ಒಡೆದು ಕಳ್ಳರು ದಾಳಿ ನಡೆಸಿದ್ದರು. ಅಂಗಡಿಯೊಳಗಿದ್ದ ಸುಮಾರು ₹95,000 ಮೌಲ್ಯದ ತಾಮ್ರ, ಹಿತ್ತಾಳೆ, ಅಲ್ಯೂಮಿನಿಯಂ ವಸ್ತುಗಳು ಹಾಗೂ ಇತರ ಸಾಮಗ್ರಿಗಳನ್ನು ಕಳ್ಳತನ ಮಾಡಲಾಗಿತ್ತು.
ಪೊಲೀಸರು ನಡೆಸಿದ ತನಿಖೆಯಲ್ಲಿ ಮಂಗಳೂರಿನ ಸರ್ಫರಾಜ್ (33), ಜಾಕೀರ್ (36), ಮೊಹಮ್ಮದ್ ಅಲ್ಫಾಜ್ (26) ಮತ್ತು ಮಂಜನಾಡಿಯ ಮೊಹಮ್ಮದ್ ರಿಯಾಜ್ (44) ಎಂಬವರನ್ನು ಉಡುಪಿಯ ಸಂತೆಕಟ್ಟೆ ಬಳಿ ಶುಕ್ರವಾರ ಬಂಧಿಸಲಾಗಿದೆ.
ಬಂಧಿತರಿಂದ 50 ಕೆಜಿ ತಾಮ್ರದ ಸರಿಗೆ, 34 ಕೆಜಿ ತಾಮ್ರದ ಮತ್ತೊಂದು ಸರಿಗೆ, 64 ಕೆಜಿ ಹಿತ್ತಾಳೆಯ ವಸ್ತು, 20 ಕೆಜಿ ಅಲ್ಯೂಮಿನಿಯಂ ವಸ್ತು, ಫ್ರಿಜ್ ಕಂಪ್ರೆಸರ್, 45 ಹಳೆಯ ಮೊಬೈಲ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ ಕಾರು ವಶಕ್ಕೆ ಪಡೆಯಲಾಗಿದೆ.
ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಕುಂದಾಪುರ ನಗರ ಪೊಲೀಸ್ ಉಪನಿರೀಕ್ಷಕರಾದ ನಂಜಾ ನಾಯ್ಕ್ ಮತ್ತು ಪುಷ್ಪಾ, ಸಂಚಾರ ಎಸ್‌ಐ ನೂತನ್ ಮತ್ತು ಸಿಬ್ಬಂದಿಗಳಾದ ಮೋಹನ್, ಸಂತೋಷ್, ಪ್ರೀನ್ಸ್, ನಾಗೇಶ್, ಮಹಾಬಲ, ರೇವತಿ, ಘನಶ್ಯಾಮ್ ಹಾಗೂ ಸತೀಶ್ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಇದೀಗ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಕರಣ ಕುರಿತು ತನಿಖೆ ಮುಂದುವರಿದಿದೆ.
