ನವದೆಹಲಿ, ಆ.7: ಕರ್ನಾಟಕದಲ್ಲಿ ಇತ್ತೀಚೆಗಷ್ಟೇ ನಡೆದ ಲೋಕಸಭಾ ಚುನಾವಣೆ ವೇಳೆ ಮಹದೇವಪುರದಲ್ಲಿ ಅಕ್ರಮ ಮತದಾನ ನಡೆದಿರುವುದಾಗಿ ಕಾಂಗ್ರೆಸ್ ಸಂಸದೀಯ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.

ಇಂದು ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನಕಲಿ ಮತದಾರರ ಪಟ್ಟಿ, ವಿಳಾಸಗಳ ಸಮಸ್ಯೆ, ಮತದಾನ ಕಳ್ಳತನಕ್ಕೆ ಸಂಬಂಧಿಸಿದ ವಿವರಗಳೊಂದಿಗೆ ಪೂರ್ಣ ದಾಖಲೆಗಳನ್ನು ಬಿಡುಗಡೆ ಮಾಡಿದರು.

ನಕಲಿ ವಿಳಾಸ, ನಕಲಿ ಮತದಾರರು:
ಮಹದೇವಪುರ ಕ್ಷೇತ್ರದಲ್ಲಿ 40,009ಕ್ಕೂ ಹೆಚ್ಚು ಮತದಾರರು ನಕಲಿ ವಿಳಾಸದೊಂದಿಗೆ ನೋಂದಾಯಿಸಲಾಗಿದ್ದು, ಮನೆ ಸಂಖ್ಯೆ ‘0’ ಎಂದು ನಮೂದಿಸಲಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಅಲ್ಲದೆ, ಸುಮಾರು 11,565 ಮಂದಿ ನಕಲಿ ಮತದಾನ ಮಾಡಿದ್ದಾರೆ ಎಂಬ ಭಾರೀ ಆರೋಪವನ್ನೂ ಅವರು ಹೊರಹಾಕಿದ್ದಾರೆ.

ವಿಚಿತ್ರ ದಾಖಲೆಗಳು:
ಒಂದೇ ವಿಳಾಸದಲ್ಲಿ 10,452ಕ್ಕೂ ಅಧಿಕ ಮತದಾರರನ್ನು ಸೇರಿಸಲಾಗಿದೆ. ಕೆಲವರ ಪೋಟೋಗಳು ವೋಟರ್ ಐಡಿಯಲ್ಲಿ ಲಭ್ಯವಿಲ್ಲ, 4,312 ಮಂದಿಗೆ ಫೋಟೋಗಳಿಲ್ಲದೆ ಐಡಿ ನೀಡಲಾಗಿದೆ. ಹಲವು ವಿಳಾಸಗಳು ಸಂಪೂರ್ಣವಾಗಿ ಖಾಲಿಯಾಗಿದ್ದು, ತಂದೆಯ ಹೆಸರುಗಳಿಲ್ಲದ ಮತದಾರರು ಪಟ್ಟಿಯಲ್ಲಿ ದಾಖಲಾಗಿದ್ದಾರೆ.

ನಕಲಿ ಮತದಾನದ ಜೀವಂತ ಉದಾಹರಣೆ:
ಒಬ್ಬ ಆದಿತ್ಯ ಶ್ರೀವಾಸ್ತವ್ ಎಂಬ ವ್ಯಕ್ತಿಯ ಹೆಸರು ವಿವಿಧ ಮತಗಟ್ಟೆಗಳಲ್ಲಿ ಕಾಣಿಸಿಕೊಂಡಿದ್ದು, ಅವನು ಹಲವೆಡೆ ಮತ ಚಲಾಯಿಸಿದ್ದಾನೆ ಎಂಬ ದಾಖಲೆಗಳನ್ನು ರಾಹುಲ್ ಗಾಂಧಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ಚುನಾವಣೆ ಆಯೋಗದ ವಿರುದ್ಧ ತೀವ್ರ ಟೀಕೆ:
ಈ ಎಲ್ಲ ಅಕ್ರಮಗಳಿಗೆ ಚುನಾವಣಾ ಆಯೋಗವೇ ಹೊಣೆದಾರವಾಗಿದೆ ಎಂದು ಆರೋಪಿಸಿರುವ ರಾಹುಲ್ ಗಾಂಧಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹಾಳುಮಾಡುವ ಈ ತಂತ್ರಗಳನ್ನು ಕಾಂಗ್ರೆಸ್ ಖಂಡಿಸುತ್ತಿದೆ ಎಂದರು.

ಸತ್ಯ ಬಯಲಾಗಬೇಕು:
ಈ ಕುರಿತು ಸೂಕ್ತ ತನಿಖೆ ನಡೆಯಬೇಕು ಹಾಗೂ ನಿಜಾಸತ್ಯವನ್ನು ಸಾರ್ವಜನಿಕರಿಗೆ ತಲುಪಿಸಬೇಕು ಎಂದು ಅವರು ಆಗ್ರಹಿಸಿದರು.

 

Related News

error: Content is protected !!