ಮೈಸೂರು, ಆಗಸ್ಟ್ 5 – ಮೈಸೂರಿನ ಸರಗೂರು ತಾಲೂಕಿನ ಬಲದಂಡೆ ನಾಲೆ ಬಳಿ ಅತೀ ಶಿಥಿಲಗೊಂಡ ಹಳೆಯ ಸೇತುವೆ ಕುಸಿದಿದ್ದು, ತಮಿಳುನಾಡಿಗೆ ಭತ್ತ ಸಾಗಿಸುತ್ತಿದ್ದ ಲಾರಿಯೊಂದು ನದಿಗೆ ಬಿದ್ದಿದೆ. ಅದೃಷ್ಟವಶಾತ್ ಈ ಭೀಕರ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಇಟ್ನ ಗ್ರಾಮದ ಬಳಿಯಿಂದ ಭತ್ತ ತುಂಬಿಕೊಂಡು ಹೊರಟಿದ್ದ TN 52 8333 ಸಂಖ್ಯೆಯ ಲಾರಿ, ರಾತ್ರಿ ವೇಳೆ ಸಂಬಂಧಿತ ನಿಷೇಧಗಳನ್ನು ಉಲ್ಲಂಘಿಸಿ ಸೇತುವೆ ಮೂಲಕ ಸಾಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಪೊಲೀಸ್ ಇಲಾಖೆ ಹಾಗೂ ಕಬಿನಿ ಜಲಾಶಯದ ಅಧಿಕಾರಿಗಳು ಕಳೆದ ಕೆಲವು ತಿಂಗಳಿಂದ ಈ ಸೇತುವೆಯ ಸುರಕ್ಷತೆಯ ಬಗ್ಗೆ ಎಚ್ಚರಿಕೆ ನೀಡುತ್ತಾ ಬಂದಿದ್ದರು. ಆದರೆ, ರಾತ್ರಿ ಸಮಯದಲ್ಲಿ ಬ್ಯಾರಿಕೇಡ್ ತೆರಳಿಸಿ ಲಾರಿಯು ಸೇತುವೆ ಮೂಲಕ ಸಾಗಲಾಗಿದೆ.
“ಸೇತುವೆ ಶಿಥಿಲವಾಗಿದೆ ಎಂಬ ಮಾಹಿತಿ ಇದ್ದರೂ, ನಿಯಮ ಉಲ್ಲಂಘಿಸಿ ಭಾರೀ ವಾಹನಗಳು ಅಲ್ಲಿ ಸಾಗುತ್ತಿದ್ದವು. ತೂಕದ ಬಲಕ್ಕೆ ಸೇತುವೆ ಕುಸಿತವು ಸಂಭವಿಸಿದೆ,” ಎಂದು ಕಾರ್ಯಪಾಲಕ ಅಭಿಯಂತ್ರಿ ಕೆ. ಉಷಾ ಸ್ಪಷ್ಟಪಡಿಸಿದರು.
ಘಟನೆ ನಂತರ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲವೆಂದು ಆರೋಪಿಸಿದ್ದಾರೆ. ಇದೀಗ ಈ ಸೇತುವೆ ಕುಸಿತದಿಂದ ಶ್ರೀ ಚಿಕ್ಕದೇವಮ್ಮ ಬೆಟ್ಟದ ದರ್ಶನಕ್ಕೆ ಹೋಗುವ ಪ್ರಮುಖ ಸಂಪರ್ಕ ಕಡಿದುಹೋಗಿದ್ದು, ಹತ್ತಾರು ಗ್ರಾಮಗಳ ಸಂಪರ್ಕಕ್ಕೂ ವ್ಯತ್ಯಯ ಉಂಟಾಗಿದೆ.
