ದೊಡ್ಡಬಳ್ಳಾಪುರ, ಜುಲೈ 2: ನಗರ ಹೊರವಲಯದ ಬಾಶೆಟ್ಟಿಹಳ್ಳಿ ಬಳಿ ಭಯಾನಕ ಘಟನೆ ನಡೆದಿದೆ. ಇಲ್ಲಿನ ಪೆಟ್ರೋಲ್ ಬಂಕ್ ಹಿಂಭಾಗದ ಪೊದೆಯಲ್ಲಿ ಗೋಣಿ ಚೀಲದಲ್ಲಿ ಮೊಟಕುಗೊಂಡ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಈ ಬೆಳವಣಿಗೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಸ್ಥಳೀಯ ವ್ಯಕ್ತಿಯೊಬ್ಬರು ಶಂಕಿತ ಚೀಲವೊಂದನ್ನು ಕಾಣಿಸಿಕೊಂಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದರು. ಮಾಹಿತಿ ಪಡೆದ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಶವವನ್ನು ವಶಕ್ಕೆ ಪಡೆದಿದ್ದಾರೆ. ಶವದ ಸ್ಥಿತಿಯಿಂದ ನೋಡಿದರೆ, ಘಟನೆ ಸುಮಾರು ಹತ್ತು ದಿನಗಳ ಹಿಂದೆ ನಡೆದಿರುವ ಸಾಧ್ಯತೆ ವ್ಯಕ್ತವಾಗಿದೆ. ಶವ ಗುರುತಿಸಲು ಸಾಧ್ಯವಾಗದಷ್ಟು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಘಟನಾ ಸ್ಥಳಕ್ಕೆ ಶ್ವಾನದಳ ಹಾಗೂ ವಿಧಿವಿಜ್ಞಾನ ತಜ್ಞರ ತಂಡ ಆಗಮಿಸಿ ಪರಿಶೀಲನೆ ನಡೆಸಿದೆ. ಶವ ಪತ್ತೆಯಾಗಿರುವ ಪ್ರದೇಶ ಜನವಸತಿ ಹೊಂದಿರುವುದರಿಂದ ಸಾರ್ವಜನಿಕರಲ್ಲಿ ಭಯ ಮತ್ತು ಗೊಂದಲ ಉಂಟಾಗಿದೆ.

ದೊಡ್ಡಬಳ್ಳಾಪುರ ಪೊಲೀಸ್ ಉಪವಿಭಾಗಾಧಿಕಾರಿ ರವಿ.ಪಿ, ಎಸ್‌ಪಿ ಸಿ.ಕೆ.ಬಾಬಾ, ಇನ್‌ಸ್ಪೆಕ್ಟರ್ ಸಾಧಿಕ್ ಪಾಷಾ ಸೇರಿದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಅಸ್ಪಷ್ಟ ಅಂಶಗಳನ್ನು ಬಯಲಿಗೆಳೆಯಲು ತನಿಖೆ ಆರಂಭಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.

Related News

error: Content is protected !!