
ಚಿಕ್ಕಬಳ್ಳಾಪುರ: ಎತ್ತುವ ಕೈ ತಾಯಿಯದ್ದೇ, ಕಾಪಾಡುವ ನೆರಳು ತಾಯಿಯದ್ದೇ ಎನ್ನಲಾಗುವುದು. ಆದರೆ ಇಲ್ಲೊಬ್ಬ ತಾಯಿ ಬದುಕಿನ ಬವಣೆ ತಾಳಲಾಗದೇ ತನ್ನ ಒಂದೇ ವರ್ಷದ ಮಗುವಿನ ಕಣ್ಣೆದುರೇ ಜೀವ ಕೊಳೆದಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ನಗರದ ಸಿಎಂಸಿ ಬಡಾವಣೆಯಲ್ಲಿ 23 ವರ್ಷದ ಝಾನ್ಸಿ ಎಂಬ ಮಹಿಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಶನಿವಾರ ರಾತ್ರಿ ಬೆಳಕಿಗೆ ಬಂದಿದೆ. ಈ ವೇಳೆ ಆಕೆಯ ಮಗು ತಾಯಿಯ ಮೃತದೇಹದ ಬಳಿ ಕಂಗಾಲಾಗಿ ಮಲಗಿದ್ದ ದೃಶ್ಯ ಭಾವುಕತೆಯ ಶಿಖರಕ್ಕೇರಿಸಿದೆ.
ಝಾನ್ಸಿಯ ಪತಿ ಈಶ್ವರ್ ಕ್ರೈನ್ ಅಪರೇಟರ್ ಆಗಿದ್ದು, ಅವರು ಊಟಕ್ಕಾಗಿ ಮನೆಗೆ ಬಂದಾಗ ಪತ್ನಿಯನ್ನು ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ತಕ್ಷಣವೇ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು, ಆಘಾತಕಾರಿ ದೃಶ್ಯವನ್ನು ಕಂಡು ಸ್ಥಳೀಯರೂ ಕೂಡ ಕಣ್ಣೀರಾಗಿದ್ದಾರೆ.
ಈ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ಬಹಿರಂಗವಾಗಿಲ್ಲ. ಕುಟುಂಬದಲ್ಲಿ ಯಾವುದೇ ಕಲಹವೇನಿದ್ದೋ, ಅಥವಾ ಆಂತರಿಕ ದಾಳವೋ ಎಂಬುದು ಪೋಲಿಸ್ ತನಿಖೆಯಿಂದ ಮಾತ್ರ ಸ್ಪಷ್ಟವಾಗಬೇಕಿದೆ.
ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ದುರ್ಘಟನೆಯ ಹಿಂದೆ ಏನೆಲ್ಲಾ ಕಾರಣಗಳಿವೆ ಎಂಬುದರ ಬಗ್ಗೆ ತನಿಖೆ ಮುಂದುವರೆದಿದೆ.