ಪ್ರಧಾನಿ ನರೇಂದ್ರ ಮೋದಿ ಅವರ ಮಾತಿನ ಶೈಲಿಯನ್ನು ಅಣಕಿಸಿ ಅಡುಗೆ ಅನಿಲ (LPG) ಬೆಲೆ ಏರಿಕೆಯನ್ನು ವ್ಯಂಗ್ಯಾತ್ಮಕವಾಗಿ ಹೇಳಿಕೊಂಡಿದ್ದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಸಾಕೇತ್ ಪುರೋಹಿತ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಪೋಹರಿ ಬ್ಲಾಕ್‌ನ ಸರ್ಕಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾಕೇತ್ ಪುರೋಹಿತ್ ಅವರು ಇತ್ತೀಚೆಗೆ ಒಂದು ಸಾಮಾಜಿಕ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರ ಮಿಮಿಕ್ರಿ ಮಾಡಿದ್ದರು. ಈ ವೇಳೆ, “ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ಜನರು ಮತ್ತೆ ಹಳೆಯ ಒಲೆಗಳ ಬಳಕೆಗೆ ಮರಳಬಹುದು; ಇದರಿಂದ ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಕಡಿಮೆಯಾಗಬಹುದು” ಎಂಬ ಅರ್ಥದಲ್ಲಿ ಅವರು ವ್ಯಂಗ್ಯವಾಡಿದ್ದರು ಎಂದು ಹೇಳಲಾಗಿದೆ. ಸುಮಾರು 58 ಸೆಕೆಂಡುಗಳ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು.
ಈ ವಿಡಿಯೋ ವೈರಲ್ ಆದ ಬಳಿಕ ಪಿಚೋರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಲೋಧಿ ಅವರು ಜಿಲ್ಲಾ ಶಿಕ್ಷಣ ಇಲಾಖೆಗೆ ದೂರು ಸಲ್ಲಿಸಿದ್ದರು. ಸರ್ಕಾರಿ ನೌಕರರಾಗಿ ಪ್ರಧಾನ ಮಂತ್ರಿಯನ್ನು ಸಾರ್ವಜನಿಕವಾಗಿ ಅಣಕಿಸುವುದು ಹಾಗೂ ಟೀಕಿಸುವುದು ನಾಗರಿಕ ಸೇವಾ ನಡಾವಳಿ ನಿಯಮಗಳ ಉಲ್ಲಂಘನೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.
ದೂರು ಆಧಾರವಾಗಿ ತನಿಖೆ ನಡೆಸಿದ ಜಿಲ್ಲಾ ಶಿಕ್ಷಣಾಧಿಕಾರಿ ವಿವೇಕ್ ಶ್ರೀವಾಸ್ತವ ಅವರು, ಸಾಕೇತ್ ಪುರೋಹಿತ್ ಅವರನ್ನು ತಕ್ಷಣದಿಂದಲೇ ಅಮಾನತುಗೊಳಿಸುವಂತೆ ಆದೇಶ ಹೊರಡಿಸಿದ್ದಾರೆ. ಅಮಾನತ್ತಿನ ಅವಧಿಯಲ್ಲಿ ಅವರನ್ನು ಬದರ್ವಾಸ್ ಬ್ಲಾಕ್ ಶಿಕ್ಷಣ ಕಚೇರಿಗೆ ನಿಯೋಜಿಸಲಾಗಿದೆ. ಮಧ್ಯಪ್ರದೇಶ ನಾಗರಿಕ ಸೇವೆಗಳ ಕಾಯ್ದೆ, 1965ರ ಸಂಬಂಧಿತ ನಿಯಮಗಳಡಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರ ಬಗ್ಗೆ ಪ್ರತಿಕ್ರಿಯಿಸಿದ ಸಾಕೇತ್ ಪುರೋಹಿತ್, “ನಾನು ಕೇವಲ ಮನರಂಜನೆಗಾಗಿ ಮಿಮಿಕ್ರಿ ಮಾಡಿದ್ದೆ. ಯಾವುದೇ ದುರುದ್ದೇಶ ಇರಲಿಲ್ಲ. ನನ್ನಿಂದ ವಿವರಣೆ ಕೇಳದೆ ಏಕಪಕ್ಷೀಯವಾಗಿ ಅಮಾನತು ಮಾಡಿರುವುದು ನ್ಯಾಯಸಮ್ಮತವಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
