ಗುರುಗ್ರಾಮ (ಹರಿಯಾಣ): ಹರಿಯಾಣದ ಗುರುಗ್ರಾಮ ನಗರದಲ್ಲಿ ವಲಸೆ ಕಾರ್ಮಿಕನೊಬ್ಬನನ್ನು ತಲೆಕೆಳಗಾಗಿ ನೇತುಹಾಕಿ ಅಮಾನುಷವಾಗಿ ಥಳಿಸಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಘಟನೆಯ ವೀಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ಘಟನೆ ಗುರುಗ್ರಾಮದ ಸೆಕ್ಟರ್ 37Cನಲ್ಲಿ ಜೂನ್ ತಿಂಗಳಲ್ಲಿ ನಡೆದಿದ್ದು, ಇತ್ತೀಚೆಗೆ ಈ ಕುರಿತು ಮಾಹಿತಿಗಳು ಮಾಧ್ಯಮಗಳಿಗೆ ಲಭ್ಯವಾಗಿವೆ. ವಲಸೆ ಕಾರ್ಮಿಕನನ್ನು ಪೈಶಾಚಿಕವಾಗಿ ಹಲ್ಲೆ ಮಾಡಿದ ವ್ಯಕ್ತಿಯನ್ನು ಗುತ್ತಿಗೆದಾರ ಎಂದು ಗುರುತಿಸಲಾಗಿದ್ದು, ಈ ಕೃತ್ಯದಲ್ಲಿ ಇನ್ನೂ ಕೆಲವರ ಸಹಭಾಗಿತ್ವವಿದೆ ಎನ್ನಲಾಗಿದೆ.

ವೀಡಿಯೋದಲ್ಲಿ ಕಾರ್ಮಿಕನು ಅಳುತ್ತಾ “ಬಿಡಿ ಬಿಡಿ” ಎಂದು ಬೇಡಿಕೊಳ್ಳುತ್ತಿದ್ದರೂ, ಆರೋಪಿಗಳು ಆತನಿಗೆ ಧಿಟ್ಟಿಯಾಗಿ ಥಳಿಸುತ್ತಿರುವ ದೃಶ್ಯಗಳು ಕಾಣಿಸುತ್ತವೆ. ಸ್ಥಳದಲ್ಲಿದ್ದ ಕೆಲವರು ತಡೆಯುವ ಪ್ರಯತ್ನ ಮಾಡಿದರೂ, ಈ ಅಮಾನುಷ ಕೃತ್ಯಕ್ಕೆ ತಡೆ ಬೀಳಲಿಲ್ಲ.

ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಎಫ್‌ಐಆರ್ ದಾಖಲಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂಬ ಮಾಹಿತಿ ದೊರಕಿದೆ. ಮತ್ತಷ್ಟು ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ತೀವ್ರ ಚಟುವಟಿಕೆ ಆರಂಭಿಸಿದ್ದಾರೆ.

ಮಾನವ ಹಕ್ಕು ಸಂಸ್ಥೆಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಈ ಕ್ರೂರ ಕೃತ್ಯವನ್ನು ತೀವ್ರವಾಗಿ ಖಂಡಿಸಿದ್ದಾರೆ. ಪೊಲೀಸರು ಶೀಘ್ರ ಕ್ರಮ ಕೈಗೊಂಡು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಲಾಗುತ್ತಿದೆ.

ಇಂತಹ ಘಟನೆಗಳು ವಲಸೆ ಕಾರ್ಮಿಕರ ಸುರಕ್ಷತೆ ಮತ್ತು ಮಾನವೀಯತೆಯ ವಿಚಾರದಲ್ಲಿ ಗಂಭೀರ ಚಿಂತೆ ಮೂಡಿಸುತ್ತಿವೆ.

error: Content is protected !!