ನೆರೆಯ ತೆಲಂಗಾಣ ರಾಜ್ಯದ ರಾಜಧಾನಿ ಹೈದರಾಬಾದ್ ನಲ್ಲಿ ಮನಕಲಕುವ ಘಟನೆಯೊಂದು ಬೆಳಕಿಗೆ ಬಂದಿದೆ. ಮದುವೆ ಪ್ರಸ್ತಾಪವನ್ನು ನಿರಾಕರಿಸಿದ್ದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ, ಹೆಚ್‌ಐವಿ ಸೋಂಕಿತ ತನ್ನ ರಕ್ತವನ್ನು ಯುವತಿಗೆ ಬಲವಂತವಾಗಿ ಚುಚ್ಚಿದ ಆರೋಪ ಕೇಳಿಬಂದಿದೆ. ಈ ಘಟನೆ ಬಳಿಕ ಉಂಟಾದ ಸಾಮಾಜಿಕ ಒತ್ತಡ ಮತ್ತು ಭಯವನ್ನು ತಾಳಲಾರದೆ 24 ವರ್ಷದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಮಾಹಿತಿಯ ಪ್ರಕಾರ, ಮನೋಹರ್ ಎಂಬ ಆರೋಪಿ ತನ್ನ ಸಂಬಂಧದ ಯುವತಿಯ ಮುಂದೆ ಮದುವೆ ಪ್ರಸ್ತಾಪ ಇಟ್ಟಿದ್ದನು. ಆರಂಭದಲ್ಲಿ ಎರಡೂ ಕುಟುಂಬಗಳು ಈ ವಿವಾಹಕ್ಕೆ ಒಪ್ಪಿಕೊಂಡಿದ್ದರೂ, ಮದುವೆಗೆ ಮುನ್ನ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ಮನೋಹರ್ ಹೆಚ್‌ಐವಿ ಪಾಸಿಟಿವ್ ಎಂದು ತಿಳಿದುಬಂದಿತ್ತು. ಇದರಿಂದ ಯುವತಿ ಮತ್ತು ಆಕೆಯ ಕುಟುಂಬ ಮದುವೆಯನ್ನು ರದ್ದುಪಡಿಸಿದ್ದರು.

ಈ ನಿರಾಕರಣೆಯನ್ನು ಸಹಿಸಲಾಗದೆ, ಮನೋಹರ್ ದುರುದ್ದೇಶದಿಂದ ನಡೆದುಕೊಂಡಿದ್ದಾನೆ. ‘ಯುವತಿಗೂ ಹೆಚ್‌ಐವಿ ಬಂದರೆ, ಆಕೆಯನ್ನು ಯಾರೂ ಮದುವೆಯಾಗುವುದಿಲ್ಲ; ಆಗ ನಾನು ಮದುವೆಯಾಗಬಹುದು’ ಎಂಬ ಕೆಟ್ಟ ಉದ್ದೇಶದಿಂದ, ಕಳೆದ ಮಾರ್ಚ್ 11ರಂದು ಸಿರಿಂಜ್ ಮೂಲಕ ತನ್ನ ರಕ್ತವನ್ನು ತೆಗೆದು ಯುವತಿಗೆ ಬಲವಂತವಾಗಿ ಚುಚ್ಚಿದ್ದಾನೆ ಎಂಬ ಆರೋಪ ಇದೆ.

ಘಟನೆಯ ನಂತರ ಯುವತಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಆಕೆಗೆ ಹೆಚ್‌ಐವಿ ಸೋಂಕು ತಗುಲಿಲ್ಲ ಎಂದು ವೈದ್ಯರು ದೃಢಪಡಿಸಿದ್ದರು. ಆದಾಗ್ಯೂ, ಈ ಸುದ್ದಿ ಸಮಾಜದಲ್ಲಿ ವ್ಯಾಪಕವಾಗಿ ಹರಡಿದ್ದು, ಯುವತಿಯ ಮೇಲೆ ಅನುಮಾನ ಮತ್ತು ದೂರಾವಳಿಯ ವಾತಾವರಣ ನಿರ್ಮಾಣವಾಗಿತ್ತು. ಸ್ನೇಹಿತರು, ಪರಿಚಿತರು ಸಹ ಆಕೆಯಿಂದ ದೂರವಾಗಲು ಪ್ರಾರಂಭಿಸಿದ್ದು, ಸಂಬಂಧಿಕರಿಂದಲೂ ನಿಂದನೆ ಎದುರಿಸಬೇಕಾಯಿತು.

ಈ ಎಲ್ಲಾ ಬೆಳವಣಿಗೆಗಳಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದ ಯುವತಿ, ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮನೆಯಲ್ಲಿ ನೇಣು ಬಿಗಿದುಕೊಂಡು ಆಕೆ ಜೀವನಕ್ಕೆ ತೆರೆ ಎಳೆದಿದ್ದಾಳೆ.

ಆತ್ಮಹತ್ಯೆಗೆ ಮುನ್ನ ಬರೆದಿದ್ದ ಡೆತ್ ನೋಟ್‌ನಲ್ಲಿ, “ಅಮ್ಮಾ, ನನ್ನನ್ನು ಕ್ಷಮಿಸಿ. ನೀವು ಕಷ್ಟಪಟ್ಟು ಬೆಳೆಸಿದ್ದರೂ ನಾನು ಜೀವನವನ್ನು ಹಾಳು ಮಾಡಿಕೊಂಡೆ. ಹೆಚ್‌ಐವಿ ಬಗ್ಗೆ ನನಗೆ ಅರಿವು ಇರಲಿಲ್ಲ. ಸಮಾಜ ನನ್ನನ್ನು ನೋಡುವ ರೀತಿ ಸಹಿಸಲು ಸಾಧ್ಯವಾಗುತ್ತಿಲ್ಲ. ಗೌರವವಿಲ್ಲದ ಜಾಗದಲ್ಲಿ ಬದುಕಲು ಇಷ್ಟವಿಲ್ಲ. ತಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ” ಎಂದು ಆಕೆ ಮನಕಲುಕುವ ಪದಗಳಲ್ಲಿ ಬರೆದಿದ್ದಾಳೆ.

ಈ ಪ್ರಕರಣದಲ್ಲಿ ಆರೋಪಿ ಮನೋಹರ್ ಬಂಧನಕ್ಕೊಳಗಾಗಿ ಜೈಲಿಗೆ ಕಳುಹಿಸಲ್ಪಟ್ಟಿದ್ದಾನೆ. ಕಾನೂನು ಅವನಿಗೆ ಶಿಕ್ಷೆ ನೀಡಬಹುದು. ಆದರೆ, ಹೆಚ್‌ಐವಿ ಸೋಂಕಿಲ್ಲ ಎಂಬುದು ಸ್ಪಷ್ಟವಾಗಿದ್ದರೂ, ಯುವತಿಯನ್ನು ಅನುಮಾನದಿಂದ ನೋಡಿದ ಸಮಾಜದ ಮನೋಭಾವವೇ ಈ ದುರ್ಘಟನೆಗೆ ಕಾರಣವಾಗಿದೆ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ.

Related News

error: Content is protected !!