
ಶಿವಮೊಗ್ಗ: ನಗರದ ಗಾಂಜಾ ವ್ಯಾಪಾರದ ಕುರಿತು ಮಾಹಿತಿ ಲಭ್ಯವಾದ ಹಿನ್ನೆಲೆ, ನಗರದಲ್ಲಿ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಇಬ್ಬರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಬಂಧಿತರಿಂದ ಸುಮಾರು ₹1.70 ಲಕ್ಷ ಮೌಲ್ಯದ ಗಾಂಜಾ ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ.
ಶಿವಮೊಗ್ಗದ ವಡ್ಡಿನಕೊಪ್ಪದ ರಂಗನಾಥ ಲೇಔಟ್‌ನಲ್ಲಿ ಇರುವ ಡಾಂಬರ್ ರಸ್ತೆಯ ಕೋಳಿಫಾರಂ ಶೆಡ್ ಹತ್ತಿರದ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಆರೋಪಿಗಳು ಗಾಂಜಾ ಮಾರಾಟ ಮಾಡುತ್ತಿದ್ದ ಸಂದರ್ಭ, ಕ್ರೈಂ ಠಾಣೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.
ಈ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಜಿ.ಕೆ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್‌ಪಿ ಅನಿಲ್ ಕುಮಾರ್ ಭೂಮರಡ್ಡಿ ಹಾಗೂ ಕಾರಿಯಪ್ಪ ಎ.ಜಿ. ಅವರ ನೇತೃತ್ವದಲ್ಲಿ ಕಾರ್ಯಾಚರಣೆ ರೂಪುಗೊಂಡಿತು.
ಸಿಇಎನ್ ಕ್ರೈಂ ಪೊಲೀಸ್ ಠಾಣೆಯ ಡಿವೈಎಸ್ಪಿ ಕೃಷ್ಣಮೂರ್ತಿ ಕೆ. ಹಾಗೂ ಇನ್ಸ್‌ಪೆಕ್ಟರ್ ಮಂಜುನಾಥ ನೇತೃತ್ವದ ತಂಡದಲ್ಲಿ ಎಎಸ್‌ಐ ಶೇಖರ್, ಹೆಡ್ ಕಾನ್ಸ್ಟೇಬಲ್ ಧರ್ಮಾ ನಾಯ್ಕ, ಅವನಾಶ್, ಕಾನ್ಸ್ಟೆಬಲ್ ನಾರಾಯಣಸ್ವಾಮಿ, ಪಿರ್ದೋಸ್ ಅಹಮದ್, ರವಿ ಬಿ, ಆಂಡ್ರ್ಯೂಸ್ ಜೊನ್ಸ್, ಪ್ರಮೋದ್ ಎಲ್.ಬಿ ಮತ್ತು ಸಂಗಮೇಶ ಭಾಗವಹಿಸಿದ್ದರು.
ಬಂಧಿತರನ್ನು ಕಾರ್ತಿಕ್ ವಿಎಲ್ ಅಲಿಯಾಸ್ ಸಾಪಡ್ (21) ಮತ್ತು ಎನ್. ರಾಜೇಶ್ ಅಲಿಯಾಸ್ ರಾಜು (24) ಎಂದು ಗುರುತಿಸಲಾಗಿದ್ದು, ಇವರಿಂದ ಒಟ್ಟು 5.780 ಕಿಲೋಗ್ರಾಂ ಒಣ ಗಾಂಜಾ ಮತ್ತು ಒಂದು ಬೈಕ್ ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.