
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದ ಕುಡುಪು ಬಳಿ ನಡೆದ ಕೇರಳ ಮೂಲದ ಮುಸ್ಲಿಂ ಯುವಕನ ಹತ್ಯೆ ಪ್ರಕರಣ ರಾಜ್ಯದಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ. ಗುಂಪು ಹಲ್ಲೆಯಾದ ಈ ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸರ ಕ್ರಮ ಪ್ರಶ್ನೆಗೆ ಒಳಪಟ್ಟಿದ್ದು, ಈಗ ಮೂರು ಮಂದಿ ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ.
ಆರಂಭದಲ್ಲಿ ಈ ಘಟನೆಗೆ ಸಂಬಂಧಿಸಿದಂತೆ “ಅಸಹಜ ಸಾವು” ಎಂದು ಪ್ರಕರಣ ದಾಖಲಿಸಲಾಗಿತ್ತು. ಆದರೆ ಮೃತನ ಮೇಲೆ ಸ್ಪಷ್ಟವಾದ ಗಾಯಗಳಿರುವುದು ದೃಢಪಟ್ಟಿದ್ದು, ನಂತರವೇ ಕೊಲೆ ಪ್ರಕರಣವಾಗಿ ಎಫ್ಐಆರ್ ದಾಖಲಿಸಲಾಯಿತು. ಘಟನೆ ಕಡೆಗೂ ರಾಜಕೀಯ ಮತ್ತು ಸಾಮಾಜಿಕ ತೀವ್ರತೆ ಪಡೆದ ಬೆನ್ನಲ್ಲೇ ಪೊಲೀಸ್ ಇಲಾಖೆ ವಿರುದ್ಧ ನಿರ್ಲಕ್ಷ್ಯದ ಆರೋಪಗಳು ಕೇಳಿಬಂದಿವೆ.
ಈ ಹಿನ್ನೆಲೆಯಲ್ಲಿ ಮಂಗಳೂರು ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಶಿವಕುಮಾರ್, ಹೆಡ್ ಕಾನ್ಸ್ಟೇಬಲ್ ಚಂದ್ರ.ಪಿ ಮತ್ತು ಕಾನ್ಸ್ಟೇಬಲ್ ಯಲ್ಲಾಲಿಂಗ ಅವರನ್ನು ಅಮಾನತು ಮಾಡಲಾಗಿದೆ. ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಈ ಮಾಹಿತಿಯನ್ನು ನೀಡಿದ್ದಾರೆ.
ಇನ್ಸ್ಪೆಕ್ಟರ್ ಶಿವಕುಮಾರ್ ಅವರು ಪ್ರಾಥಮಿಕವಾಗಿ ಘಟನೆಗೆ ಸೂಕ್ತ ಸೂಕ್ತ ಕಾನೂನು ಕ್ರಮ ಕೈಗೊಳ್ಳದೇ, ಅಸಹಜ ಸಾವು ಎಂದು ಕೇವಲ ದಾಖಲೆ ಮುಗಿಸಲು ಯತ್ನಿಸಿದ್ದಾರನ್ನೂ ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಗೃಹ ಸಚಿವ ಜಿ. ಪರಮೇಶ್ವರ್ ಅವರಿಗೆ ಪತ್ರ ಬರೆದು ಇನ್ಸ್ಪೆಕ್ಟರ್ ವಿರುದ್ಧ ತ್ವರಿತ ಕ್ರಮಕ್ಕೆ ಶಿಫಾರಸು ಮಾಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 23 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ಮುಂದುವರಿದಿರುವಂತೆ, ಮತ್ತಷ್ಟು ಬೆಳವಣಿಗೆಗಳ ನಿರೀಕ್ಷೆಯಿದೆ.
ಘಟನೆಯ ಹಿಂದಿನ ನಿಖರ ಕಾರಣ, ಘೋಷಣೆಗಳ ಭೂಮಿಕೆ ಮತ್ತು ಶಹೀನಬಾಗ್ ಪ್ರಭಾವದಂತ ಅಂಶಗಳ ಕುರಿತು ತನಿಖೆ ಆರಂಭವಾಗಿದೆ. ರಾಜ್ಯದ ಮಾನವ ಹಕ್ಕುಗಳ ಆಯೋಗವೂ ಈ ಪ್ರಕರಣವನ್ನು ಗಮನಕ್ಕೆ ತೆಗೆದುಕೊಂಡಿರುವ ಸಾಧ್ಯತೆ ಇದೆ.