ಬೆಂಗಳೂರು ನಗರದ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಯುವತಿಯರ ಅನುಮತಿಯಿಲ್ಲದೆ ಫೋಟೋ ಹಾಗೂ ವೀಡಿಯೋಗಳನ್ನು ತೆಗೆಯುತ್ತಾ, ಅವುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದ ಯುವಕನೊಬ್ಬನನ್ನು ಅಶೋಕನಗರ ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.
ಬಂಧಿತನನ್ನು ಹುಸೇನ್ (19) ಎಂದು ಗುರುತಿಸಲಾಗಿದೆ. ಆತನು ‘ದಿಲ್ಬರ್ ಜಾನಿ’ ಎಂಬ ನಾಮಧೇಯದ ಇನ್‌ಸ್ಟಾಗ್ರಾಮ್ ಖಾತೆ ಮೂಲಕ ಈ ಅಸಭ್ಯ ಕೃತ್ಯ ಎಸಗುತ್ತಿದ್ದ. ಎಂ.ಜಿ.ರೋಡ್, ಬ್ರಿಗೇಡ್ ರೋಡ್ ಹಾಗೂ ಇತರ ನೈಟ್ ಲೈಫ್ ಪ್ರದೇಶಗಳಲ್ಲಿ ರಾತ್ರಿ ವೇಳೆ ಯುವತಿಯರನ್ನು ಗುರಿಯಾಗಿಸಿ ಅವರು ಅನುಮಾನಿಸದಂತೆ ಗೂಪ್ತವಾಗಿ ಫೋಟೋ ಮತ್ತು ವೀಡಿಯೋಗಳನ್ನು ಕಲೆಹಾಕುತ್ತಿದ್ದ.
ಆ ಬಳಿಕ ಆ ದೃಶ್ಯಗಳನ್ನು “ಬೆಂಗಳೂರು ನೈಟ್ ಲೈಫ್” ಎಂಬ ಶೀರ್ಷಿಕೆಯಿಂದ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡುತ್ತಿದ್ದ. ಈ ಪೋಸ್ಟ್‌ಗಳಲ್ಲಿ ಕೆಲವು ಯುವತಿಯ ಗೌರವಕ್ಕೆ ಧಕ್ಕೆ ಉಂಟುಮಾಡುವ ರೀತಿಯದ್ದಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.
ಪೊಲೀಸರಿಗೆ ಈ ಬಗ್ಗೆ ಸಾಕಷ್ಟು ಫೀಡ್‌ಬ್ಯಾಕ್ ದೊರೆಯುತ್ತಿದ್ದಂತೆ ತನಿಖೆ ಆರಂಭಿಸಿ, ತಂತ್ರಜ್ಞಾನವನ್ನು ಬಳಸಿಕೊಂಡು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ಪೊಲೀಸರು ಆರೋಪಿಯಿಂದ ಬಳಕೆಯಲ್ಲಿದ್ದ ಮೊಬೈಲ್ ಫೋನ್, ಇನ್‌ಸ್ಟಾಗ್ರಾಂ ಖಾತೆಯ ವಿವರಗಳು ಸೇರಿದಂತೆ ಸಾಕ್ಷ್ಯಗಳನ್ನು ವಶಕ್ಕೆ ಪಡೆದಿದ್ದಾರೆ.
