ಬೆಳಗಾವಿ, ಆ.7: ಮುನವಳ್ಳಿ ಪುರಸಭೆ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ನೇತೃತ್ವದ ತಂಡ ಇಂದು ಮುಂಜಾನೆ ಪುರಸಭೆ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ಆರಂಭಿಸಿದೆ. ದಾಳಿಯ ವೇಳೆ ಲೋಕಾಯುಕ್ತ ಎಸ್‌ಪಿ ಹನುಮಂತರಾಯ ಹಾಗೂ ಸಿಬ್ಬಂದಿ ಸಹಿತ ದರ್ಜೆಯ ಅಧಿಕಾರಿಗಳ ತಂಡವೂ ಸೇರಿತ್ತು.
ಪೌರ ಸೇವೆಗಳ ಕುರಿತಂತೆ ಸಾರ್ವಜನಿಕರಿಂದ ನೇರವಾಗಿ ಮಾಹಿತಿ ಸಂಗ್ರಹಿಸಿ, ಕಚೇರಿಯಲ್ಲಿ ನಡೆಯುತ್ತಿರುವ ಕಾರ್ಯಪದ್ಧತಿಯನ್ನು ಅಧ್ಯಯನ ನಡೆಸಲಾಗಿದೆ. ದಾಖಲೆ ಹಸ್ತಾಂತರದಲ್ಲಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಈ ದಾಳಿ ನಡೆದಿರುವ ತಿಳಿದುಬಂದಿದೆ.
ಕಚೇರಿಯಲ್ಲಿನ ಪ್ರಮುಖ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಲಾಗಿದ್ದು, ಅವ್ಯವಸ್ಥೆಯ ಯಾವುದೇ ಲಕ್ಷಣಗಳು ಕಂಡುಬಂದರೆ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ದಾಳಿಯಿಂದ ಸ್ಥಳೀಯ ಆಡಳಿತ ಯಂತ್ರಕ್ಕೆ ಶಾಕ್ ನೀಡಿದ್ದು, ಪುರಸಭೆಯ ಒಳಾಂಗಣದಲ್ಲಿ ಆತಂಕದ ವಾತಾವರಣ ಮೂಡಿಸಿದೆ.
