ಶಿವಮೊಗ್ಗ: ರಾಜ್ಯದಾದ್ಯಂತ ಭ್ರಷ್ಟಾಚಾರ ವಿರುದ್ಧ ತೀವ್ರ ಕ್ರಮಕ್ಕೆ ಮುಂದಾದ ಲೋಕಾಯುಕ್ತ ಸಂಸ್ಥೆ ಇಂದು (ಮಂಗಳವಾರ) ವಿವಿಧ ಜಿಲ್ಲೆಗಳಾದ್ಯಂತ ಏಕಕಾಲದಲ್ಲಿ ದಾಳಿಗೆ ಕೈಹಾಕಿದೆ. ಈ ಕ್ರಮದ ಭಾಗವಾಗಿ ಶಿವಮೊಗ್ಗ ಜಿಲ್ಲೆಯಲ್ಲಿಯೂ ಮೂರು ವಿಭಿನ್ನ ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳ ತಂಡಗಳು ಪರಿಶೀಲನೆ ನಡೆಸಿವೆ.
ಲೋಕಾಯುಕ್ತ ಎಸ್ಪಿ ಎಂ.ಎಚ್. ಮಂಜುನಾಥ್ ಚೌಧರಿ ನೇತೃತ್ವದ ತಂಡ, ಸಾವಯವ ಕೃಷಿ ಹಾಗೂ ಸಂಶೋಧನಾ ನಿರ್ದೇಶಕರಾಗಿರುವ ಡಾ. ಎಸ್. ಪ್ರದೀಪ್ ನಿವಾಸ, ಕಚೇರಿ ಸೇರಿದಂತೆ ಹತ್ತುಹಲವು ಪ್ರದೇಶಗಳಲ್ಲಿ ದಾಳಿ ನಡೆಸಿದೆ. ಶಿವಮೊಗ್ಗ ನಗರದ ಪ್ರಿಯಾಂಕಾ ಲೇಔಟ್ನಲ್ಲಿರುವ ಅವರ ನಿವಾಸ, ಶಿಕಾರಿಪುರ ತಾಲೂಕು ಭದ್ರಾಪುರದಲ್ಲಿರುವ ಫಾರ್ಮ್ ಹೌಸ್ ಹಾಗೂ ಹೊಸನಗರದಲ್ಲಿರುವ ಇನ್ನೊಂದು ಸ್ಥಳದಲ್ಲಿ ಸರ್ಚ್ ಆಪರೇಷನ್ ನಡೆಯುತ್ತಿದೆ.
ರಾಜ್ಯದ ಹಲವು ನಗರಗಳಲ್ಲಿ ಇದೇ ರೀತಿಯ ದಾಳಿಗಳು ನಡೆಯುತ್ತಿದ್ದು, ಅಧಿಕೃತ ಮಾಹಿತಿ ಲಭ್ಯವಿರುವ ಮಟ್ಟಿಗೆ, ಭ್ರಷ್ಟಾಚಾರದ ವಿರುದ್ಧ ಈ ವರ್ಷದಲ್ಲೇ ಇದೊಂದು ಪ್ರಮುಖ ಕ್ರಮವಾಗಿದೆ. ಶಿವಮೊಗ್ಗದಲ್ಲಿ ನಡೆಯುತ್ತಿರುವ ಈ ಪರಿಶೀಲನೆಯ ಪರಿಣಾಮ ಹೇಗಿರುತ್ತದೆ ಎಂಬುದನ್ನು ಮುಂದೆ ತಿಳಿದುಬರಬೇಕಿದೆ.
