ಬೆಂಗಳೂರು: ರಾಜ್ಯದ ಸಚಿವ ಭೈರತಿ ಸುರೇಶ್ ಅವರ ಮಾಜಿ ಪರ್ಸನಲ್ ಸೆಕ್ರಟರಿ (ಪಿಎಸ್) ಮಾರುತಿ ಬಗಲಿ ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಗುರುವಾರ ದಿಢೀರ್ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಆಸ್ತಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ದೂರುಗಳ ಬೆನ್ನಲ್ಲೇ ಕಾರ್ಯಾಚರಣೆ ಕೈಗೊಂಡ ಲೋಕಾಯುಕ್ತ ಅಧಿಕಾರಿಗಳು, ಮಾರುತಿ ಬಗಲಿ ನಿವಾಸದಲ್ಲಿ ತೀವ್ರ ತಪಾಸಣೆ ನಡೆಸಿದ್ದು, ಸುಮಾರು 8 ನಿವೇಶನಗಳ ದಾಖಲೆ, 5 ವಾಸಸ್ತವ ಮನೆಗಳ ದಾಖಲೆ, ಮತ್ತು 19 ಎಕರೆ ಜಮೀನಿನ ಕಾಗದ ಪತ್ರಗಳು ಸೇರಿದಂತೆ ಹಲವಾರು ಮಹತ್ವದ ಆಸ್ತಿ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಾರುತಿ ಬಗಲಿ ಅವರು ಕಳೆದ ಎರಡು ವರ್ಷಗಳ ಕಾಲ ಸಚಿವ ಭೈರತಿ ಸುರೇಶ್ ಅವರಿಗೆ ಪರ್ಸನಲ್ ಸೆಕ್ರಟರಿಯಾಗಿ ಕೆಲಸ ಮಾಡುತ್ತಿದ್ದು, ಮೂರು ತಿಂಗಳ ಹಿಂದೆ ಅವರು ಸೇವೆಯಿಂದ ಹೊರಬಿದ್ದಿದ್ದರು. ಅವರು ಕೆಲಸದಲ್ಲಿದ್ದ ಅವಧಿಯಲ್ಲೇ ಅಕ್ರಮವಾಗಿ ಆಸ್ತಿ ಸಂಪಾದನೆ ನಡೆದಿದೆ ಎಂಬ ಆರೋಪದ ಹಿನ್ನಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.
ಲೋಕಾಯುಕ್ತದ ಈ ದಾಳಿಯಿಂದ ಭೈರತಿ ಸುರೇಶ್ ಅವರ ಕಚೇರಿ ಹಾಗೂ ಆಡಳಿತ ಕ್ರಮಗಳು ಮತ್ತೊಮ್ಮೆ ಬೆಳಕಿಗೆ ಬಂದಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಹಾಗೂ ತನಿಖಾ ವರದಿ ಹೊರಬೀಳಬೇಕಿದೆ. ಅಧಿಕಾರಿಗಳ ಪ್ರಾಥಮಿಕ ಮಾಹಿತಿ ಪ್ರಕಾರ, ವಶಪಡಿಸಿಕೊಳ್ಳಲಾದ ದಾಖಲೆಗಳ ಪರಿಶೀಲನೆಯ ನಂತರ ಮುಂದಿನ ಹಂತದ ಕ್ರಮ ಕೈಗೊಳ್ಳಲಾಗುವುದು.
ಇದೇ ಸಂದರ್ಭದಲ್ಲಿ, ರಾಜಕೀಯ ವಲಯದಲ್ಲಿ ಈ ದಾಳಿ ಚರ್ಚೆಗೆ ಗ್ರಾಸವಾಗಿದ್ದು, ಭ್ರಷ್ಟಾಚಾರ ಹಾಗೂ ಅಕ್ರಮ ಆಸ್ತಿ ವಿಚಾರಗಳಲ್ಲಿ ಸಾರ್ವಜನಿಕ ಗಮನ ಮತ್ತೊಮ್ಮೆ ಸೆಳೆಯುತ್ತಿದೆ.
