ವಡಗೇರಾ (ಯಾದಗಿರಿ ಜಿಲ್ಲೆ): ಭೂ ವಿವಾದದ ಪ್ರಕರಣದಲ್ಲಿ ಪರಿಹಾರ ನೀಡುವ ಹೆಸರಿನಲ್ಲಿ 50 ಸಾವಿರ ರೂ. ಲಂಚ ಪಡೆಯುತ್ತಿದ್ದ ಕೇಸ್ ವರ್ಕರ್ ಒಬ್ಬನು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಶುಕ್ರವಾರ ಸಂಜೆ ನಗರದಲ್ಲಿ ನಡೆದಿದೆ.
ವಡಗೇರಾ ತಹಶೀಲ್ದಾರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರವೀಣಕುಮಾರ ಎಂಬುವವರು, ಭೂ ವ್ಯಾಜ್ಯಕ್ಕೆ ಸಂಬಂಧಪಟ್ಟಂತೆ ಬಾಕಿಯಿದ್ದ ಪ್ರಕರಣವೊಂದನ್ನು ವಿಲೇವಾರಿ ಮಾಡಿಕೊಡುವ ನೆಪದಲ್ಲಿ ದೂರುದಾರ ಮಹ್ಮದ್ ಸಲಿಂ ಮುಲ್ಲಾದವರಿಂದ ಲಂಚ ಬೇಡಿದ್ದರು. ಈ ಸಂಬಂಧ ನೀಡಲಾದ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಪಥಕ ರೂಪಿಸಿ ದಾಳಿ ನಡೆಸಿದರು.
ಸ್ನೇಹಪೂರ್ಣವಾಗಿ ಹಣ ಸ್ವೀಕರಿಸುತ್ತಿದ್ದ ವೇಳೆ ದಾಳಿ ಮಾಡಿದ ಅಧಿಕಾರಿಗಳು, ಪ್ರವೀಣಕುಮಾರರನ್ನು ಲಂಚದ ಹಣದೊಂದಿಗೆ ರೆಡ್ ಹ್ಯಾಂಡ್ ಹಿಡಿದಿದ್ದಾರೆ. ಯಾದಗಿರಿ ಲೋಕಾಯುಕ್ತ ಎಸ್.ಪಿ ಉಮೇಶ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಜೆ.ಎಚ್ ಇನಾಂದಾರ್, ಪಿಎಸ್ಐ ಸಿದ್ದರಾಯ ಬಳೂರ್ಗಿ ಹಾಗೂ ತಂಡದ ಇತರ ಸದಸ್ಯರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ಮುಂದಿನ ತನಿಖೆ ಕೈಗೊಂಡಿದ್ದಾರೆ.
