ತಮಿಳುನಾಡು: ಸಾರ್ವಜನಿಕರ ರಕ್ಷಣೆಗೆ ಇರಬೇಕಾದ ಪೊಲೀಸರೇ ಕ್ರೌರ್ಯಕ್ಕೆ ಇಳಿದ ಸಾಥಾನ್‌ಕುಲಂ ಕಸ್ಟಡಿ ಸಾವು ಪ್ರಕರಣ ದೇಶವನ್ನೇ ತಲ್ಲಣಗೊಳಿಸಿತ್ತು. ಇದೀಗ ಸುಮಾರು ಆರು ವರ್ಷಗಳ ದೀರ್ಘ ಕಾನೂನು ಹೋರಾಟದ ಬಳಿಕ, ಮಧುರೈ ನ್ಯಾಯಾಲಯವು ಈ ಪ್ರಕರಣವನ್ನು “ಅಪರೂಪದಲ್ಲಿ ಅಪರೂಪದ” ಎಂದು ಪರಿಗಣಿಸಿ, ತಪ್ಪಿತಸ್ಥ 9 ಪೊಲೀಸ್ ಸಿಬ್ಬಂದಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.

ಏನಿದು ಪ್ರಕರಣ?
2020ರ ಜೂನ್‌ನಲ್ಲಿ ಲಾಕ್‌ಡೌನ್ ವೇಳೆ ಹೆಚ್ಚುವರಿ ಸಮಯ ಅಂಗಡಿ ತೆರೆದಿದ್ದ ಕಾರಣಕ್ಕೆ P. Jayaraj ಮತ್ತು ಅವರ ಮಗ J. Bennix ಅವರನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಠಾಣೆಯಲ್ಲಿ ನಡೆಸಿದ ಅಮಾನವೀಯ ಹಲ್ಲೆಯಿಂದ ಇಬ್ಬರೂ ಮೃತಪಟ್ಟಿದ್ದರು. ಈ ಘಟನೆ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಪ್ರಕರಣದ ಗಂಭೀರತೆಯನ್ನು ಗಮನಿಸಿ ತನಿಖೆಯನ್ನು Central Bureau of Investigation (ಸಿಬಿಐ)ಗೆ ವಹಿಸಲಾಗಿತ್ತು. ತನಿಖೆಯಲ್ಲಿ ಅಂದಿನ ಇನ್ಸ್‌ಪೆಕ್ಟರ್ ಶ್ರೀಧರ್, ಸಬ್‌ ಇನ್ಸ್‌ಪೆಕ್ಟರ್‌ಗಳಾದ ರಘು ಗಣೇಶ್, ಬಾಲಕೃಷ್ಣನ್ ಸೇರಿದಂತೆ ಒಂಬತ್ತು ಮಂದಿ ಪೊಲೀಸರು ಸಾವಿಗೆ ನೇರ ಕಾರಣ ಎಂದು ಸಾಕ್ಷ್ಯಾಧಾರಗಳೊಂದಿಗೆ ಸಾಬೀತಾಗಿದೆ.

“ಅಪರೂಪದಲ್ಲಿಯೇ ಅಪರೂಪದ ಪ್ರಕರಣ”
ಶಿಕ್ಷೆ ಪ್ರಕಟಿಸುವ ಮುನ್ನ ನ್ಯಾಯಾಲಯವು ಎರಡೂ ಪಾರ್ಶ್ವದ ವಾದಗಳನ್ನು ಆಲಿಸಿತು. ಮೃತ ಜಯರಾಜ್ ಅವರ ಪತ್ನಿ ಸೆಲ್ವರಾಣಿ ನ್ಯಾಯಾಲಯದಲ್ಲಿ ಕಣ್ಣೀರಿಡುತ್ತಾ, “ನನ್ನ ಗಂಡ ಮತ್ತು ಮಗ ನಿರಪರಾಧಿಗಳು. ಅವರಿಗೆ ಗರಿಷ್ಠ ಶಿಕ್ಷೆ ನೀಡಬೇಕು” ಎಂದು ಮನವಿ ಮಾಡಿದರು. ಮತ್ತೊಂದೆಡೆ ಆರೋಪಿಗಳು ತಮ್ಮ ಕುಟುಂಬ ಹಿನ್ನೆಲೆಯನ್ನು ಪರಿಗಣಿಸಿ ಕನಿಷ್ಠ ಶಿಕ್ಷೆ ನೀಡುವಂತೆ ಕೋರಿದರು. ಆದರೆ ಸಿಬಿಐ ಪರ ವಕೀಲರು ಇದು “ಅಪರೂಪದಲ್ಲಿಯೇ ಅಪರೂಪದ” ಪ್ರಕರಣವಾಗಿದ್ದು, ಮರಣದಂಡನೆಯೇ ಸೂಕ್ತ ಎಂದು ವಾದಿಸಿದರು.

₹1.40 ಕೋಟಿ ಪರಿಹಾರಕ್ಕೆ ಆದೇಶ
ನ್ಯಾಯಾಧೀಶರು ಪೊಲೀಸರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, “ರಕ್ಷಣೆ ನೀಡಬೇಕಾದವರೇ ಕ್ರೌರ್ಯ ಎಸಗಿರುವುದು ಕ್ಷಮಾರ್ಹವಲ್ಲ” ಎಂದು ಹೇಳಿದರು. ಸುಳ್ಳು ಪ್ರಕರಣ ದಾಖಲಿಸಿ ಅಮಾಯಕರನ್ನು ಠಾಣೆಯಲ್ಲಿ ಹಿಂಸೆ ನೀಡಿ ಕೊಲ್ಲಲಾಗಿದೆ. ಇದಕ್ಕೆ ಜೀವಾವಧಿ ಶಿಕ್ಷೆ ಸಾಕಾಗುವುದಿಲ್ಲ ಎಂದು ಹೇಳಿ, ಎಲ್ಲಾ ಒಂಬತ್ತು ಆರೋಪಿಗಳಿಗೆ ಮರಣದಂಡನೆ ವಿಧಿಸಿದರು. ಜೊತೆಗೆ, ಮೃತರ ಕುಟುಂಬಕ್ಕೆ ಒಟ್ಟು ₹1.40 ಕೋಟಿ ಪರಿಹಾರ ನೀಡಲು ಆದೇಶಿಸಿದರು.

ದೋಷಿಗಳಾದ ಪೊಲೀಸ್ ಸಿಬ್ಬಂದಿ
ಇನ್ಸ್‌ಪೆಕ್ಟರ್ ತೇಗು, ಸಬ್‌-ಇನ್ಸ್‌ಪೆಕ್ಟರ್‌ಗಳಾದ ಬಾಲಕೃಷ್ಣನ್, ರಘು ಗಣೇಶ್ ಸೇರಿದಂತೆ ಮುರುಗನ್, ಸಾಮದುರೈ, ಮುತ್ತುರಾಜ್, ಚೆಲ್ಲದುರೈ, ಥಾಮಸ್ ಫ್ರಾನ್ಸಿಸ್ ಮತ್ತು ವೇಯಿಲ್ ಮುತ್ತು ಸೇರಿ ಒಂಬತ್ತು ಮಂದಿ ಪೊಲೀಸರಿಗೆ ಈ ತೀರ್ಪು ಅನ್ವಯಿಸಿದೆ.

ಈ ತೀರ್ಪು ದೇಶಾದ್ಯಂತ ಗಮನ ಸೆಳೆದಿದ್ದು, ಪೊಲೀಸ್ ದೌರ್ಜನ್ಯ ವಿರುದ್ಧ ಕಠಿಣ ಸಂದೇಶ ನೀಡಿದ ಮಹತ್ವದ ತೀರ್ಪು ಎಂದೇ ಪರಿಗಣಿಸಲಾಗುತ್ತಿದೆ.

error: Content is protected !!