
ಪಟ್ನಾ: ಬಿಹಾರದ ಪಟ್ನಾ ಹೊರವಲಯದ ಶಾಹಪುರ್ ಡೇರಾ ಗ್ರಾಮದಲ್ಲಿ ನಡೆದ ಲೈವ್ ಸಂಗೀತ ಕಾರ್ಯಕ್ರಮದ ನಂತರ ಹೃದಯವಿದ್ರಾವಕ ಘಟನೆ ನಡೆದಿದೆ. ನೃತ್ಯ ಪ್ರದರ್ಶನ ಮುಗಿಸಿ ಮನೆಗೆ ಮರಳುತ್ತಿದ್ದ ಮಹಿಳಾ ಡ್ಯಾನ್ಸರ್ ಮೇಲೆ, ಮೂವರು ದುಷ್ಕರ್ಮಿಗಳು ಆಕೆಯ ಪತಿಯ ಮುಂದೆಯೇ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ.
ಬುಧವಾರ ಮುಂಜಾನೆ, ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟಿ ತನ್ನ ಪತಿಯೊಂದಿಗೆ ಮನೆಗೆ ಮರಳುತ್ತಿದ್ದಾಗ, ದಂಪತಿಗಳು ದಿಗ್ವಾರಾ ರೈಲ್ವೆ ನಿಲ್ದಾಣಕ್ಕೆ ಹೋಗುವ ದಾರಿ ಕೇಳಿದ್ದರು. ಈ ಸಂದರ್ಭದಲ್ಲಿ ಮೂವರು ಅಪರಿಚಿತರು ಸಹಾಯದ ನೆಪದಲ್ಲಿ ತಮ್ಮ ಮೋಟಾರ್ ಸೈಕಲ್‌ಗಳಲ್ಲಿ ದಂಪತಿಗಳನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ.
ನಿಲ್ದಾಣಕ್ಕೆ ಕರೆದೊಯ್ಯುವ ಬದಲು, ಮಹಿಳೆಯನ್ನು ಪುರುಷರಿಂದ ದೂರವಿಟ್ಟಿರುವಲ್ಲೇ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿದೆ. ದೌರ್ಜನ್ಯ ನಡೆಸಿದ ನಂತರ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ದಾನಾಪುರದ ಎಎಸ್ಪಿ ಭಾನು ಪ್ರತಾಪ್ ಸಿಂಗ್ ಮಾಹಿತಿ ನೀಡಿದ್ದಾರೆ.
ಈ ಕುರಿತು ಮಹಿಳೆ ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ತಕ್ಷಣವೇ ಎಫ್‌ಐಆರ್ ದಾಖಲಿಸಿದ್ದು, ತನಿಖೆ ಆರಂಭಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿತರಾದ ಮನೋಜ್ ಕುಮಾರ್ ಮತ್ತು ಮನೀಶ್ ಕುಮಾರ್ ಅವರನ್ನು ಬುಧವಾರ ರಾತ್ರಿ ಬಂಧಿಸಲಾಗಿದ್ದು, ಮೂರನೇ ಆರೋಪಿ ನಾಗೇಂದ್ರ ಕುಮಾರ್‌ಗಾಗಿ ಶೋಧ ಮುಂದುವರಿದಿದೆ.
ಈ ದಾರುಣ ಕೃತ್ಯ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗುವಂತಿದ್ದು, ಮಹಿಳಾ ಭದ್ರತೆ ಕುರಿತಾಗಿ ಮತ್ತೊಮ್ಮೆ ಪ್ರಶ್ನೆಗಳು ಎದ್ದಿವೆ.