ಶ್ರೀರಂಗಪಟ್ಟಣ, ಜುಲೈ 14 – ಮೈಸೂರು-ಬೆಂಗಳೂರು ಹಳೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭಯಾನಕ ಅಪಘಾತದಲ್ಲಿ, ಖಾಲಿ ಆಗಿ ಸಾಗುತ್ತಿದ್ದ KSRTC ಬಸ್ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿದ ಘಟನೆ ನಡೆದಿದೆ. ಪುತ್ತೂರು ಡಿಪೋಗೆ ಸೇರಿದ ಈ ಬಸ್ ಚಾಲಕನ ನಿರ್ಲಕ್ಷ್ಯದಿಂದ ರಸ್ತೆ ಬದಿಯ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದು ಬಳಿಕ ಹಳ್ಳಕ್ಕೆ ಉರುಳಿಬಿದ್ದಿದೆ. ಅದೃಷ್ಟವಶಾತ್ ಬಸ್‌ನಲ್ಲಿ ಪ್ರಯಾಣಿಕರು ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ.
ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೊಮ್ಮೂರು ಅಗ್ರಹಾರದ ಬಳಿ ಮಧ್ಯಾಹ್ನದ ವೇಳೆಗೆ ನಡೆದಿದೆ. ಈ ಬಸ್ ಚನ್ನಪಟ್ಟಣದಲ್ಲಿ ಸಂಭವಿಸಿದ್ದ ಅಪಘಾತ ಸಂಬಂಧವಾಗಿ ಸ್ಥಳೀಯ ಪೊಲೀಸ್ ಠಾಣೆಯಿಂದ ಬಿಡುಗಡೆ ಪಡೆದ ನಂತರ, ಚಾಲಕ ಮತ್ತು ಕಂಡಕ್ಟರ್ ಖಾಲಿ ಬಸ್ಸನ್ನು ಪುತ್ತೂರುಗೆ ಹಿಂದಿರುಗಿಸುತ್ತಿದ್ದರು.
ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ, ಬಸ್ ರಸ್ತೆ ಬದಿಯಲ್ಲಿದ್ದ ಟ್ರ್ಯಾಕ್ಟರ್‌ಗೆ ಡಿಕ್ಕಿಯಾದ ನಂತರ ಡಿವೈಡರ್ ಹಾರಿ ಬಲ ಬದಿಯ ಹಳ್ಳಕ್ಕೆ ಉರುಳಿದೆ. ಅಪಘಾತದಲ್ಲಿ ಬಸ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಘಟನೆ ಸ್ಥಳಕ್ಕೆ ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯ ಸಿಬ್ಬಂದಿ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
