
ಬೆಂಗಳೂರು: ಐಪಿಎಲ್ 2025 ಹಂತದ 18ನೇ ಟ್ರೋಫಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಗೆದ್ದ ಹಿನ್ನೆಲೆಯಲ್ಲಿ ಜುನ್ 4ರಂದು ಬೆಂಗಳೂರಿನ ಜನಸ್ವಾಮಿ ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರ ಭರ್ಜರಿ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಿತ್ತು. ಆದರೆ, ಈ ಕಾರ್ಯಕ್ರಮ ಆಘಾತಕರ ಅಂತ್ಯ ಕಂಡು, ನೂಕುನುಗ್ಗಲು ಮತ್ತು ಕಾಲ್ತುಳಿತದಿಂದ 11 ಜನರು ದುರಂತವಾಗಿ ಪ್ರಾಣ ಕಳೆದುಕೊಂಡಿದ್ದರು.
ಘಟನೆಗೆ ಹೊಣೆಗಾರರೆಂದು ನೋಡಲಾದ ಹಿನ್ನೆಲೆಯಲ್ಲಿ, ತಕ್ಷಣವೇ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಐಪಿಎಸ್ ಅಧಿಕಾರಿ ವಿಕಾಸ್ ಕುಮಾರ್ ಸೇರಿದಂತೆ ಹಲವಾರು ಅಧಿಕಾರಿಗಳನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿತ್ತು. ಆದರೆ ಈ ನಿರ್ಧಾರಕ್ಕೆ ಇದೀಗ ಕೇಂದ್ರ ಆಡಳಿತಾತ್ಮಕ ನ್ಯಾಯಮಂಡಳಿ (CAT) ತಡೆ ನೀಡಿದೆ.
ವಿಕಾಸ್ ಕುಮಾರ್ ಅವರ ಅಮಾನತು ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸಿದ CAT ಪೀಠದ ನ್ಯಾ. ಬಿ.ಕೆ. ಶ್ರೀನಿವಾಸ ಮತ್ತು ನ್ಯಾ. ಸಂತೋಷ ಮೆಹ್ರಾ ಅವರಿದ್ದ ಪೀಠ, ಅಮಾನತು ಕ್ರಮವನ್ನು ರದ್ದುಗೊಳಿಸಿ ಅವರ ಸೇವೆಗಳನ್ನು ಪುನರ್ ಸ್ಥಾಪನೆ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಇದೇ ಜೊತೆಗೆ, ಅವರನ್ನು ಹಿಂದಿನ ಹುದ್ದೆಗೆ ಮರುನಿಯುಕ್ತಗೊಳಿಸಿ, ಅಮಾನತಿನ ಅವಧಿಯ ಸಂಪೂರ್ಣ ಭತ್ಯೆಗಳು ಮತ್ತು ಸೌಲಭ್ಯಗಳನ್ನು ಒದಗಿಸಬೇಕೆಂದು ಆದೇಶ ನೀಡಲಾಗಿದೆ.
ವಿಕಾಸ್ ಕುಮಾರ್ ಪರವಾಗಿ ಹಿರಿಯ ವಕೀಲ ಧ್ಯಾನ ಚಿನ್ನಪ್ಪ ವಾದಿಸಿ, ಈ ಅಮಾನತು ತುರ್ತುವಾಗಿ, ನ್ಯಾಯಸಮ್ಮತ ಪ್ರಕ್ರಿಯೆಯಿಲ್ಲದೆ ಜಾರಿಗೆ ತರಲಾಗಿದೆ ಎಂಬುದನ್ನು ನ್ಯಾಯಮಂಡಳಿಗೆ ಮನವರಿಕೆ ಮಾಡಿಸಿದರು.
ಈ ಆದೇಶದಿಂದಾಗಿ ಕಾಲ್ತುಳಿತ ಪ್ರಕರಣದಲ್ಲಿ ರಾಜ್ಯ ಸರ್ಕಾರಕ್ಕೆ ಮುನ್ನೆಚ್ಚರಿಕೆ ಇಲ್ಲದ ಕ್ರಮ ಕೈಗೊಂಡ್ದ ಪರಿಣಾಮವಾಗಿ ನ್ಯಾಯಾಂಗದಲ್ಲಿ ಮುಖಭಂಗವಾಗಿರುವುದಂತು ಸ್ಪಷ್ಟವಾಗಿದೆ.