ಚಿಕ್ಕಮಗಳೂರು, ಜುಲೈ 19: ಜಿಲ್ಲೆಯಲ್ಲಿ ಮಾನವೀಯತೆಗೂ ಮಿತಿ ಇರುವ ಭಯಾನಕ ಘಟನೆ ನಡೆದಿದೆ. ಗಾಂಧಿನಗರದಲ್ಲಿರುವ ಸರ್ಕಾರಿ ವಿಶೇಷ ದತ್ತು ಸಂಸ್ಥೆಯಲ್ಲಿ ಕೆಲಸ ಮಾಡುವ ಶಿಶು ಆರೈಕಾ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಒಂದು ವರ್ಷ ಮೂರೂ ತಿಂಗಳ ಹೆಣ್ಣು ಮಗು ಗಂಭೀರವಾಗಿ ಗಾಯಗೊಂಡಿರುವ ದುರಂತ ನಡೆದಿದೆ.

ಘಟನೆ ಜುಲೈ 9ರಂದು ನಡೆದಿದ್ದು, ಮಲ ವಿಸರ್ಜನೆ ಮಾಡಿದ ಮಗುವನ್ನು ಶುದ್ಧಮಾಡುವ ಸಂದರ್ಭ ಬಿಸಿ ನೀರು ಸುರಿದ ಪರಿಣಾಮವಾಗಿ ಮಗುವಿನ ಸೊಂಟದ ಕೆಳಭಾಗ ಸಂಪೂರ್ಣ ಸುಟ್ಟು ಹೋಗಿದೆ. ಈ ಅನಾಥ ಮಗು ದತ್ತು ಪಡೆಯಲು ಪೋಷಕರು ಸಿದ್ಧತೆ ನಡೆಸುತ್ತಿದ್ದರು. ಆದರೆ ಆಸ್ಪತ್ರೆ ಬೆಡ್‌ನಲ್ಲಿ ನರಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ದತ್ತು ಸಂಸ್ಥೆ ಮಕ್ಕಳ ರಕ್ಷಣಾ ನಿರ್ದೇಶನಾಲಯದಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅನಾಥ ಮತ್ತು ತ್ಯಜಿತ ಮಕ್ಕಳ ಆರೈಕೆ ಹಾಗೂ ಸುರಕ್ಷತೆಗಾಗಿ ಸ್ಥಾಪಿಸಲಾಗಿದೆ. ಆದರೆ ಇಲ್ಲಿನ ಸಿಬ್ಬಂದಿಯ ಅಸಡ್ಡೆ ಮತ್ತು ಅಜಾಗರೂಕತೆಯಿಂದ ಈ ದುರ್ಘಟನೆ ನಡೆದಿದೆ ಎನ್ನಲಾಗುತ್ತಿದೆ.

ಘಟನೆಯಾದ ಬಳಿಕ ವಿಷಯವನ್ನು ಮೇಲಧಿಕಾರಿಗಳಿಗೆ ಮುಚ್ಚಿಹಾಕಲು ಸಿಬ್ಬಂದಿ ಯತ್ನಿಸಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ. ಇನ್ನು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ತೀವ್ರ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಕರಣ ಸಾಮಾಜಿಕ ಮತ್ತು ಮಕ್ಕಳ ಹಕ್ಕು ರಕ್ಷಣಾ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲಾ ಮಕ್ಕಳ‌ ರಕ್ಷಣಾ ಘಟಕ ಹಾಗೂ ಸಂಬಂಧಿತ ಇಲಾಖೆಗಳು ಘಟನೆಯ ಬಗ್ಗೆ ತನಿಖೆ ಆರಂಭಿಸಬೇಕೆಂಬ ಒತ್ತಾಯ ಹೆಚ್ಚಾಗಿದ್ದು, ನಿರ್ಲಕ್ಷ್ಯ ಪ್ರದರ್ಶಿಸಿದ ಸಿಬ್ಬಂದಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹ ವ್ಯಕ್ತವಾಗಿದೆ.

Related News

error: Content is protected !!