ಮೆಲ್ಬೋರ್ನ್ (ಆಸ್ಟ್ರೇಲಿಯಾ), ಜುಲೈ 19 – ಆಸ್ಟ್ರೇಲಿಯಾದ ಮೆಲ್ಬೋರ್ನ್‌ನ ಆಲ್ಟೋನಾ ಮೆಡೋಸ್ ಪ್ರದೇಶದ ಸೆಂಟ್ರಲ್ ಸ್ಕ್ವೇರ್ ಶಾಪಿಂಗ್ ಸೆಂಟರ್ ಬಳಿ ಭೀಕರ ಹಲ್ಲೆ ನಡೆದಿದೆ. 33 ವರ್ಷದ ಭಾರತೀಯ ವ್ಯಕ್ತಿ ಸೌರಭ್ ಆನಂದ್‌ ಮೇಲೆ ಹದಿಹರೆಯದ ಐವರು ಯುವಕರ ಗುಂಪು ಮಚ್ಚೆ ಸೇರಿದಂತೆ ಮಾರಣಾಂತಿಕ ಆಯುಧಗಳಿಂದ ದಾಳಿ ನಡೆಸಿದ್ದು, ಅವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಶನಿವಾರ ಸಂಜೆ ಸುಮಾರು 7:30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು, ಆನಂದ್ ತಮ್ಮ ಮನೆಗೆ ನಡೆಯುತ್ತಾ, ಫೋನ್ ಮೂಲಕ ಸ್ನೇಹಿತನೊಂದಿಗೆ ಮಾತನಾಡುತ್ತಿದ್ದಾಗ ದಾಳಿ ಸಂಭವಿಸಿದೆ. ಈ ವೇಳೆ ಯುವಕರ ಗುಂಪು ಆತನನ್ನು ಸುತ್ತುವರಿದು, ಆಕ್ರಮಣ ಆರಂಭಿಸಿದೆ.

ಆನಂದ್‌ನ ಹೇಳಿಕೆಗೆ ಅನುಸಾರ, ಗುಂಪಿನಲ್ಲಿ ಇದ್ದ ಒಬ್ಬನು ಜೇಬುಗಳನ್ನು ಪರಿಶೀಲಿಸುತ್ತಿದ್ದರೆ, ಇನ್ನೊಬ್ಬನು ತಲೆಗೆ ನಿರಂತರ ಹೊಡೆದು ಗಾಯಗೊಳಿಸಿದ್ದ. ಮೂರನೇ ವ್ಯಕ್ತಿ ಗದ್ದಲದ ನಡುವೆಯೇ ಆತನ ಗಂಟಲಿಗೆ ಮಚ್ಚೆ ಇಟ್ಟಿದ್ದ. ತೀವ್ರ ಆತಂಕದಲ್ಲಿ ಆತನು ರಕ್ಷಿಸಿಕೊಳ್ಳಲು ಪ್ರಯತ್ನಿಸಿದಾಗ, ಮಚ್ಚೆಯಿಂದ ಕೈಗೆ ಭೀಕರವಾಗಿ ಹೊಡೆದಿದ್ದು, ಕೈ ತುಂಡಾಗಿತ್ತು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ತುರ್ತು ಶಸ್ತ್ರಚಿಕಿತ್ಸೆಯಿಂದ ವೈದ್ಯರು ಆ ಕೈಗೆ ಮರು ಜೋಡನೆ ಮಾಡಿದ್ದಾರೆ.

ಇದೇ ವೇಳೆ ಬೆನ್ನು ಮತ್ತು ಭುಜಕ್ಕೂ ಗುಂಪು ದಾಳಿ ನಡೆಸಿದ್ದು, ಮೂಳೆ ಮುರಿದಿದೆ ಹಾಗೂ ತಲೆಯ ಭಾಗಕ್ಕೂ ಗಾಯವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆನಂದ್, “ಮೂರು ಬಾರಿ ಮಚ್ಚೆಯಿಂದ ಹೊಡೆದಿದ್ದಾರೆ. ಈ ಘಟನೆಯು ನನ್ನ ಜೀವನದ ಭೀಕರ ಅನುಭವ” ಎಂದು ಆಸ್ಟ್ರೇಲಿಯಾದ ‘ದಿ ಏಜ್’ ಮಾಧ್ಯಮದೊಂದಿಗೆ ಹಂಚಿಕೊಂಡಿದ್ದಾರೆ.

ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ದಾಳಿಕೋರರ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ. ದಾಳಿ ಹಿಂದಿನ ಉದ್ದೇಶ ಇನ್ನೂ ಬಹಿರಂಗವಾಗಿಲ್ಲದಿದ್ದರೂ, ಸ್ಥಳೀಯ ಸಮುದಾಯದಲ್ಲಿ ಭಯವ್ಯಾಪಿಸಿದೆ.

ಈ ಘಟನೆ ಪ್ರವಾಸಿಗರು ಮತ್ತು ವಿದೇಶಿ ವಲಸಿಗರ ಸುರಕ್ಷತೆಯ ಕುರಿತಂತೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.

Related News

error: Content is protected !!