ಭಟ್ಕಳ: ಭಟ್ಕಳ ತಾಲೂಕಿನ ಮಾವಿನಕುರ್ವಾ ಬಂದರು ಪ್ರದೇಶದಲ್ಲಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ನಡೆಸುತ್ತಿದ್ದ ಸ್ಥಳಕ್ಕೆ ಪೊಲೀಸರು ದಾಳಿ ನಡೆಸಿ ಎಂಟು ಮಂದಿ ಆರೋಪಿಗಳನ್ನು ಬಂಧಿಸಿರುವ ಘಟನೆ ನಡೆದಿದೆ.
ಗಂಭೀರ ಮಾಲಿನ್ಯಕ್ಕೆ ಗುರಿಯಾಗಿರುವ ಈ ಪ್ರದೇಶದಲ್ಲಿ ಜೂಜು ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಭಟ್ಕಳ ಪೊಲೀಸರು ದಾಳಿ ನಡೆಸಿದ್ದು, ಸ್ಥಳದಲ್ಲಿ ಹಲವು ಮಂದಿ ಜೂಜುಕೋರರು ಓಡಿ ಹೋಗಿದ್ದಾರೆ. ಆದರೆ, ಎಂಟು ಮಂದಿ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಬಂಧಿತರಲ್ಲಿ ಮಾವಿನಕುರ್ವಾ ನಿವಾಸಿಗಳಾದ ರಾಘವೇಂದ್ರ ವೀರಮಾಸ್ತಿ, ನಾಗೇಶ ಖಾರ್ವಿ, ಶ್ರೀನಿವಾಸ ಖಾರ್ವಿ, ಗೋವಿಂದ ಖಾರ್ವಿ, ಪಾಂಡುರಂಗ ಖಾರ್ವಿ ಹಾಗೂ ಶಿರಾಲಿಯ ಮೋಹನ್ ದೇವಾಡಿಗ, ಟಗರು ರಸ್ತೆಯ ಸನಾವುಲ್ಲಾ ಭಾಷಾ ಸೇರಿದ್ದಾರೆ.
ದಾಳಿಯ ವೇಳೆ ಆರೋಪಿಗಳಿಂದ ನಾಲ್ಕು ಬೈಕುಗಳು ಹಾಗೂ ನಗದು ರೂ. 4,938 ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವುಗಳ ಮೌಲ್ಯ ಸುಮಾರು 2 ಲಕ್ಷ ರೂಪಾಯಿಗಳಷ್ಟಾಗುತ್ತದೆ ಎಂದು ಅಂದಾಜಿಸಲಾಗಿದೆ.
ಪೊಲೀಸರು ಈಗಾಗಲೇ ಓಡಿ ಹೋಗಿರುವ ಇತರ ಜೂಜುಕೋರರ ಪತ್ತೆಗೆ ಬಲೆ ಬೀಸಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ಮುಂದುವರಿದಿದೆ.
