ಬಳ್ಳಾರಿ: ಖದೀಮರು ಡಿಜಿಟಲ್ ಅರೆಸ್ಟ್ ನೆಪದಲ್ಲಿ ಸೆಣೆ ಹಾಕಿ ನಗರದ ನಿವೃತ್ತ ಸಿವಿಲ್ ಗುತ್ತಿಗೆದಾರರೊಬ್ಬರನ್ನು ₹88 ಲಕ್ಷಕ್ಕೂ ಅಧಿಕ ಹಣಕ್ಕೆ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಸಂತ್ರಸ್ತ ವ್ಯಕ್ತಿಯು ಬಳ್ಳಾರಿ ನಗರದ ಸೈಬರ್ ಅಪರಾಧ, ಆರ್ಥಿಕ ಅಪರಾಧ ಮತ್ತು ಮಾದಕದ್ರವ್ಯ ಠಾಣೆಗೆ ದೂರು ನೀಡಿದ್ದು, ಜುಲೈ 24ರಂದು ಎಫ್ಐಆರ್ ದಾಖಲಾಗಿದೆ.
ಸಂತ್ರಸ್ತರು ಜುಲೈ 5ರಂದು ಅನೇಕ ಅಜ್ಞಾತ ಮೊಬೈಲ್ ನಂಬರ್ಗಳಿಂದ ಕರೆ ಮತ್ತು ವಿಡಿಯೊ ಕರೆಗಳನ್ನು ಪಡೆದಿದ್ದಾರೆ. ಕರೆ ಮಾಡಿದವರು ತಾವು ಜಾರಿ ನಿರ್ದೇಶನಾಲಯ (ED) ಮತ್ತು ಕೇಂದ್ರ ತನಿಖಾ ದಳ (CBI) ಅಧಿಕಾರಿಗಳೆಂದು ಸುಳ್ಳು ಪರಿಚಯ ನೀಡಿ, ಭಯ ಮೂಡಿಸಿದ್ದಾರೆ.
“ಜೆಟ್ ಏರ್ವೇಸ್ನ ಮಾಜಿ ಮುಖ್ಯಸ್ಥ ನರೇಶ್ ಗೊಯೆಲ್ ₹200 ಕೋಟಿಯ ಹಗರಣ ಮಾಡಿದ್ದಾರೆ. ಅವರ ನಿವಾಸದಲ್ಲಿ ನಿಮ್ಮ ಎಟಿಎಂ ಕಾರ್ಡ್ ಪತ್ತೆಯಾಗಿದ್ದು, ಅದರಿಂದ ₹2 ಕೋಟಿ ವರ್ಗಾವಣೆ ಮಾಡಲಾಗಿದೆ. ಈ ಹಣದ ವ್ಯವಹಾರದಲ್ಲಿ ನೀವು ₹25 ಲಕ್ಷ ಕಮಿಷನ್ ಪಡೆದಿದ್ದೀರಿ. ವೈಯಕ್ತಿಕ ಮಾಹಿತಿಯನ್ನು ಮಾರಾಟ ಮಾಡಿದ್ದೀರಿ. ನಿಮ್ಮ ವಿರುದ್ಧ ಬಂಧನ ವಾರೆಂಟ್ ಇದೆ” ಎಂದು ಹೇಳಿ, ವಾಟ್ಸಾಪ್ ಮೂಲಕ ನಕಲಿ ವಾರಂಟ್ ಕಳುಹಿಸಿ ಬೆದರಿಸಿದ್ದಾರೆ.
ಜುಲೈ 7ರಂದು ಮತ್ತೊಮ್ಮೆ ಕರೆ ಮಾಡಿದ ವಂಚಕರು, “ನಿಮ್ಮನ್ನು ಮುಂಬೈನ ಸಿಬಿಐ ನ್ಯಾಯಾಧೀಶರ ಮುಂದೆ ಹಾಜರುಪಡಿಸುತ್ತೇವೆ. ವಿಚಾರಣೆ ಮುಗಿಯುವವರೆಗೂ ನಾವು ಸೂಚಿಸುವ ಖಾತೆಗಳಿಗೆ ಹಣ ಜಮಾ ಮಾಡಬೇಕು” ಎಂದು ಹೇಳಿದ್ದಾರೆ. ವಂಚಿತರು ಭಯಪಟ್ಟು ಜುಲೈ 19ರವರೆಗೆ ಹಂತ ಹಂತವಾಗಿ ₹88,20,098 ರುಪಾಯಿ ಜಮೆ ಮಾಡಿದ್ದಾರೆ.
ಹೆಚ್ಚಾಗಿ ಹಣ ಕಳೆದುಕೊಂಡ ಬಳಿಕ ಇದೊಂದು ದೊಡ್ಡ ವಂಚನೆ ಎಂದು ಗ್ರಹಿಸಿದ ಸಂತ್ರಸ್ತರು ತಕ್ಷಣವೇ ಪೊಲೀಸರಿಗೆ ದೂರು ನೀಡಿದ್ದಾರೆ. ಸೈಬರ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
