ಉತ್ತರ ಪ್ರದೇಶದ ಆಗ್ರಾದಲ್ಲಿ ಅಕ್ರಮ ಸಂಬಂಧದ ಹಿನ್ನೆಲೆ ಪತ್ನಿ ತನ್ನ ಪ್ರೇಮಿಯ ಜೊತೆ ಸೇರಿ ಗಂಡನನ್ನು ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಮೃತ ವ್ಯಕ್ತಿಯನ್ನು ಲೋಕೇಂದ್ರ ಎಂದು ಗುರುತಿಸಲಾಗಿದೆ. ಕೆಲ ದಿನಗಳ ಹಿಂದೆ ಆತ ನಾಪತ್ತೆಯಾಗಿದ್ದ ಬಗ್ಗೆ ಆತನ ಸಹೋದರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಬಳಿಕ ಏಪ್ರಿಲ್ 1ರಂದು ಆಗ್ರಾದ ಸೈಯಾನ್ ಪ್ರದೇಶದಲ್ಲಿ ಅರ್ಧ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಗುರುತಿಸಲು ಕಷ್ಟವಾಗಿತ್ತು. ಆದರೆ ಮುಂಗೈ ಮೇಲಿನ ಟ್ಯಾಟೂ ಮೂಲಕ ಅದು ಲೋಕೇಂದ್ರನ ಶವ ಎಂದು ಖಚಿತಪಡಿಸಲಾಗಿದೆ.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಐದು ತಂಡಗಳನ್ನು ರಚಿಸಿ ತನಿಖೆ ಆರಂಭಿಸಿದರು. ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ವೇಳೆ ಘಟನಾ ಸ್ಥಳದ ಬಳಿ ಮದ್ಯದ ಬಾಟಲಿ ಮತ್ತು ಕೆಲವು ಪುರಾವೆಗಳು ದೊರೆತಿದ್ದವು. ಈ ಆಧಾರದ ಮೇಲೆ ಲೋಕೇಂದ್ರನ ಪತ್ನಿ, ಆಕೆಯ ಪ್ರೇಮಿ ಮಹೇಶ್ ಪ್ರಜಾಪತಿ ಹಾಗೂ ಆತನ ಸ್ನೇಹಿತ ಧರ್ಮವೀರ್ ಅವರನ್ನು ವಶಕ್ಕೆ ಪಡೆಯಲಾಗಿದೆ.

ವಿಚಾರಣೆಯಲ್ಲಿ ಹತ್ಯೆಯ ಹಿಂದಿನ ಸಂಚು ಬಯಲಾಗಿದೆ. ಲೋಕೇಂದ್ರನ ಪತ್ನಿ ಮತ್ತು ಮಹೇಶ್ ನಡುವೆ ದೀರ್ಘಕಾಲದಿಂದ ಅಕ್ರಮ ಸಂಬಂಧ ಇತ್ತು. ಇತ್ತೀಚೆಗೆ ಈ ಸಂಬಂಧದ ಬಗ್ಗೆ ತಿಳಿದುಕೊಂಡ ಲೋಕೇಂದ್ರ, ಪತ್ನಿಯನ್ನು ಗದರಿಸಿದ್ದ. ಇದರಿಂದ ಕೋಪಗೊಂಡ ಪತ್ನಿ ಮತ್ತು ಆಕೆಯ ಪ್ರೇಮಿ ಸೇರಿ ಹತ್ಯೆ ಸಂಚು ರೂಪಿಸಿದ್ದರು.

ಘಟನೆಯ ದಿನ ಲೋಕೇಂದ್ರ ಮನೆಯಿಂದ ಹೊರಟಾಗ, ಪತ್ನಿ ಮಹೇಶ್‌ಗೆ ಮಾಹಿತಿ ನೀಡಿದ್ದಳು. ನಂತರ ಮಹೇಶ್ ಮತ್ತು ಧರ್ಮವೀರ್, ಲೋಕೇಂದ್ರನನ್ನು ಹೊಲಕ್ಕೆ ಕರೆದುಕೊಂಡು ಹೋಗಿ ಮದ್ಯ ಸೇವಿಸುವ ನೆಪದಲ್ಲಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದರು. ಬಳಿಕ ಶವದ ಮೇಲೆ ಪೆಟ್ರೋಲ್ ಸುರಿದು ಗೋಧಿಯ ಮೂಟೆಗಳಿಂದ ಮುಚ್ಚಿ ಬೆಂಕಿ ಹಚ್ಚಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಪ್ರಕರಣ ಸಂಬಂಧ ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

error: Content is protected !!