ಭೋಪಾಲ್ (ಜುಲೈ 25): ಮಧ್ಯ ಪ್ರದೇಶದ ಇಂದೋರ್ ನಗರದ ಖಜ್ರಾನಾ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ ಅಭೂತಪೂರ್ವ ಘಟನೆ ನಡೆದಿದೆ. ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (ಎಸ್‌ಐ) ಒಬ್ಬರನ್ನು ಗುಂಪು ಮಹಿಳೆಯರು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಅಮಾನಷವಾಗಿ ಥಳಿಸಿರುವ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಮಹಿಳೆಯೊಬ್ಬರ ಮನೆಯಲ್ಲಿ ಎಸ್‌ಐ ಸುರೇಶ್ ಹೆಸರಿನ ಅಧಿಕಾರಿ ಮದ್ಯಪಾನ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಅಕ್ರಮ ಸಂಬಂಧದ ಬಗ್ಗೆ ಹಲವು ದಿನಗಳಿಂದ ಸಂಶಯದಲ್ಲಿದ್ದ ಪತ್ನಿ ಈ ದೃಶ್ಯವನ್ನು ನೋಡಿದ ನಂತರ ಸಿಡಿದು ಹೋಗಿದ್ದು, ಕುಟುಂಬಸ್ಥರ ಸಹಾಯದಿಂದ ಆತನನ್ನು ಹೊರಗೆ ಎಳೆದು ಬಂದು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ವೀಡಿಯೊ ಈಗ ಜೋರಾಗಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಆಕ್ರೋಶ ಮತ್ತು ಚರ್ಚೆಗೆ ಕಾರಣವಾಗಿದೆ. ಸ್ಥಳೀಯರ ಪ್ರಕಾರ, ಸುರೇಶ್ ಕಳೆದ ಕೆಲ ತಿಂಗಳಿನಿಂದ ಖೇಡಿ ಪ್ರದೇಶದ ವಿವಾಹಿತ ಮಹಿಳೆಯೊಬ್ಬರ ಮನೆಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದರು. ಗುರುವಾರ ಬೆಳಿಗ್ಗೆ 6 ಗಂಟೆಯ ಸುಮಾರಿಗೆ, ಸ್ಥಳೀಯರು ಆತನನ್ನು ಅತ್ತ ಮಹಿಳೆಯ ಮನೆಯಲ್ಲಿ ಮದ್ಯಪಾನ ಮಾಡಿದ ಸ್ಥಿತಿಯಲ್ಲಿ ಪತ್ತೆಹಚ್ಚಿದರೆಂದೂ ಮಾಹಿತಿ ಲಭ್ಯವಾಗಿದೆ.
ಘಟನೆಯ ಬಳಿಕ ಪತ್ನಿ, ಆಕೆಯ ಬಂಧುಗಳು ಹಾಗೂ ಕೆಲ ನೆರೆಹೊರೆಯವರು ಸೇರಿ ಎಸ್‌ಐಯನ್ನು ಥಳಿಸಿದ್ದಾರೆ. ಪರಿಸ್ಥಿತಿ ತೀವ್ರಗೊಂಡ ಬಳಿಕ ಸ್ಥಳಕ್ಕೆ ಹೆಚ್ಚಿನ ಪೊಲೀಸ್ ಪಡೆಯನ್ನು ಕರೆಸಿಕೊಳ್ಳಲಾಗಿದ್ದು, ಆರೋಪಿ ಮಹಿಳೆಯರ ಪೈಕಿ ಕೆಲವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಸುರೇಶ್ ಅವರ ವಿರುದ್ಧ ಕೂಡಾ ಇಲಾಖಾತ್ಮಕ ಕ್ರಮ ಜರುಗಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇಂತಹ ವರ್ತನೆಯಿಂದ ಪೊಲೀಸ್ ಇಲಾಖೆಯ ಗೌರವಕ್ಕೆ ಧಕ್ಕೆ ಆಗುತ್ತಿದೆ ಎಂಬ ಆರೋಪಗಳು ಸಹ ಕೇಳಿ ಬರುತ್ತಿವೆ.
