
ಮಂಗಳೂರು: ಮರವೂರು ಪ್ರದೇಶದ ರೈಲ್ವೇ ಸೇತುವೆ ಸಮೀಪ ಅಕ್ರಮವಾಗಿ ನಡೆಯುತ್ತಿದ್ದ ಮರಳುಗಾರಿಕೆ ಸ್ಥಳಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಸುಮಾರು 150 ಮೆಟ್ರಿಕ್ ಟನ್ ಮರಳು ಹಾಗೂ ಟಿಪ್ಪರ್ ಸೇರಿ ಒಟ್ಟು ಸುಮಾರು 5 ಲಕ್ಷ ರೂಪಾಯಿ ಮೌಲ್ಯದ ಯಂತ್ರೋಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಸೋಮವಾರ ಮಧ್ಯಾಹ್ನ 3 ಗಂಟೆಯ ಸಮಯದಲ್ಲಿ ನಡೆದ ಈ ತಪಾಸಣೆಯ ವೇಳೆ ಅಕ್ರಮ ಮರಳು ಸಾಗಣೆ ನಡೆಸುತ್ತಿದ್ದವರು ಅಧಿಕಾರಿಗಳನ್ನು ಕಂಡು ಸ್ಥಳದಿಂದ ಪರಾರಿಯಾಗಿದ್ದಾರೆ.
ರೈಲ್ವೇ ಸೇತುವೆಯ ಕೆಳಭಾಗದಲ್ಲೇ ನಿಯಮ ಉಲ್ಲಂಘಿಸಿ ಮರಳು ಹೊರತೆಗೆಯಲಾಗುತ್ತಿತ್ತು. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ನಿಯಮಗಳ ಪ್ರಕಾರ, ಸೇತುವೆಯ ಎರಡೂ ಭಾಗಗಳಿಂದ ತಲಾ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಮರಳುಗಾರಿಕೆಗೆ ಅವಕಾಶವಿಲ್ಲ. ಆದರೂ ಈ ಮಿತಿ ಮೀರಿ ಮರಳು ಉಗ್ರಹಿಸಲಾಗುತ್ತಿತ್ತು.
ದಾಳಿ ಕಾರ್ಯಾಚರಣೆಯನ್ನು ಉಪನಿರ್ದೇಶಕಿ ಎಂ.ಸಿ. ಕೃಷ್ಣವೇಣಿ ಅವರ ಮಾರ್ಗದರ್ಶನದಲ್ಲಿ ಗಣಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ನಡೆಸಿದ್ದರು. ಸ್ಥಳದಲ್ಲಿ ಅಕ್ರಮ ಮರಳುಗಾರಿಕೆ ಸಂಬಂಧ ತನಿಖೆ ಮುಂದುವರಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.