ಬೆಂಗಳೂರು ನಗರದ ಹುಳಿಮಾವು ಸಮೀಪ ನಡೆದ ದಾರುಣ ಅಪಘಾತದಲ್ಲಿ ಮದುವೆ ಸಿದ್ಧತೆಯಲ್ಲಿ ತೊಡಗಿದ್ದ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. 28 ವರ್ಷದ ಅಕ್ಷತ್ ಮೃತ ಯುವಕನಾಗಿದ್ದು, ತನ್ನ ಮದುವೆಯ ಆಹ್ವಾನ ಪತ್ರಿಕೆಗಳನ್ನು ಹಂಚುವ ಕೆಲಸದಲ್ಲಿ ನಿರತರಾಗಿದ್ದನು.

ಹುಳಿಮಾವು ಗ್ರಾಮದ ಶ್ರೀ ಕೋದಂಡ ರಾಮಸ್ವಾಮಿ ದೇವಾಲಯದಲ್ಲಿ ನಡೆಯುತ್ತಿದ್ದ ಬ್ರಹ್ಮರಥೋತ್ಸವಕ್ಕೆ ಬಂದಿದ್ದ ಅಕ್ಷತ್, ಜಾತ್ರೆಯ ಪಲ್ಲಕ್ಕಿಗಳನ್ನು ವೀಕ್ಷಿಸುತ್ತಾ ನಿಂತಿದ್ದ ವೇಳೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಅವರು ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಮದುವೆ ಸಮಾರಂಭದ ಸಂಭ್ರಮದಲ್ಲಿ ತೊಡಗಿದ್ದ ಕುಟುಂಬಕ್ಕೆ ಈ ಘಟನೆ ಆಘಾತ ತಂದಿದೆ. ಮದುವೆಗೆ ಸಿದ್ಧವಾಗಿದ್ದ ಯುವಕನ ಅಕಾಲಿಕ ಸಾವು ಮನೆಯವರನ್ನು ದುಃಖ ಸಾಗರದಲ್ಲಿ ಮುಳುಗಿಸಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಪಲ್ಲಕ್ಕಿಗಳನ್ನು ತೆರವುಗೊಳಿಸಲು ಪೊಲೀಸರ ಒತ್ತಡದ ನಡುವೆ ಟ್ರ್ಯಾಕ್ಟರ್ ಚಲಾಯಿಸಲು ಹೋಗಿದ್ದ ವ್ಯಕ್ತಿಯಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಘಟನೆ ನಡೆದಿದ್ದರೂ ದೇವಾಲಯದ ಟ್ರಸ್ಟಿಗಳು ಸ್ಥಳಕ್ಕೆ ಬಾರದಿರುವುದಾಗಿ ಆರೋಪಗಳು ಕೇಳಿಬಂದಿವೆ.

ಘಟನಾ ಸ್ಥಳಕ್ಕೆ ಡಿಸಿಪಿ ಗೋಪಾಲ್ ಬ್ಯಾಕೋಡ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

error: Content is protected !!