ಕಾರವಾರ, ಜುಲೈ 11: ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಹಳೆಯ ದಾಂಡೇಲಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಸಂಘದ ಸಾಲ ತೀರಿಸಲಾಗದೇ ಸಂಕಷ್ಟಕ್ಕೊಳಗಾದ ದಂಪತಿ, ಕೇವಲ 20 ದಿನಗಳ ಗಂಡು ಮಗುವನ್ನು ಮೂರು ಲಕ್ಷ ರೂ.ಗಳಿಗೆ ಮಾರಾಟ ಮಾಡಿದ ವೃತ್ತಾಂತ ಬೆಳಕಿಗೆ ಬಂದಿದೆ.

ದೇಶಪಾಂಡೆ ನಗರದಲ್ಲಿ ವಾಸವಿದ್ದ ವಸೀಂ ಚಂಡು ಪಟೇಲ್ ಹಾಗೂ ಪತ್ನಿ ಮಾಹೀನ್, ಜೂನ್ 17 ರಂದು ದಾಂಡೇಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಕುಟುಂಬದ ಆರ್ಥಿಕ ಸ್ಥಿತಿ ದುರ್ಬಲವಾಗಿದ್ದು, ಸಂಘಗಳಿಂದ ಪಡೆದಿದ್ದ ಸಾಲದ ಒತ್ತಡದಿಂದ ದಂಪತಿ ಕಂಗೆಟ್ಟಿದ್ದರು. ಸಾಲಗಾರರ ತೀವ್ರ ಬೆನ್ನುಬಿಗಿತದಿಂದ ಹೊರಬರಲು ಮಾರ್ಗವಿಲ್ಲದೆ, ಅಂತಿಮವಾಗಿ ಅವರು ಮಗುವನ್ನು ಮಾರಾಟ ಮಾಡುವ ನಿರ್ಧಾರಕ್ಕೆ ಬಿದ್ದರು.

ಜುಲೈ 8ರಂದು ದಂಪತಿ ಧಾರವಾಡಕ್ಕೆ ತೆರಳಿ, ಬೆಳಗಾವಿಯ ಆನಗೋಳ ನಿವಾಸಿಗಳಾದ ನೂರ್ ಮಹಮ್ಮದ್ ಅಬ್ದುಲ್ ಮಜೀದ್ (47) ಮತ್ತು ಕಿಶನ್ ಐರೇಕರ (42) ಎಂಬವರಿಗೆ ಮಗುವನ್ನು ₹3 ಲಕ್ಷ ರೂಪಾಯಿಗೆ ಮಾರಾಟ ಮಾಡಿದರು.

ಮಾಹೀನ್ ಮನೆಗೆ ಮಗುವು ಕಾಣೆಯಾಗಿರುವುದನ್ನು ಗಮನಿಸಿದ ಅಂಗನವಾಡಿ ಕಾರ್ಯಕರ್ತೆ ರೇಷ್ಮಾ ಮಹಾದೇವ ಪಾವಸ್ಥರ, ಪ್ರಕರಣದ ಬಗ್ಗೆ ಅನುಮಾನ ವ್ಯಕ್ತಪಡಿಸಿ ತಕ್ಷಣವೇ ದಾಂಡೇಲಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರು. ಪಿಎಸ್‌ಐ ಅಮೀನಸಾಬ ಅತ್ತಾರ ಅವರ ನೇತೃತ್ವದಲ್ಲಿ ತನಿಖೆ ಆರಂಭವಾಯಿತು.

ಪೊಲೀಸರು ಬೆಳ್ಳಂಬೆಳಗ್ಗೆ ಬೆಳಗಾವಿಗೆ ತೆರಳಿ, ಮಗು ಖರೀದಿಸಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಬಳಿಕ ಮಗುವನ್ನು ಶಿರಸಿಯ ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಲಾಗಿದೆ.

ಈ ಪ್ರಕರಣ ಸಂಬಂಧ ಮತ್ತಷ್ಟು ಆರೋಪಿಗಳ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದು, ಸದ್ಯವೂ ಅವರಿಗೆ ಶೋಧ ಕಾರ್ಯ ನಡೆಯುತ್ತಿದೆ.

ಇಂತಹ ಘಟನೆಗಳು, ಸಮಾಜದಲ್ಲಿ ಆರ್ಥಿಕ ಸಮಸ್ಯೆಗಳು ಎಷ್ಟು ಭಾರೀ ಮಾನವೀಯ ವಿಕೃತಿಗಳಿಗೆ ದಾರಿ ಮಾಡಿಕೊಡಬಹುದು ಎಂಬುದನ್ನು ಸ್ಪಷ್ಟಪಡಿಸುತ್ತವೆ.

error: Content is protected !!