ಹುಬ್ಬಳ್ಳಿ ನಗರವನ್ನು ಬೆಚ್ಚಿಬೀಳಿಸಿರುವ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಮ್ ಟ್ರೈನರ್ ಸಮೀರ್‌ನ ಕರಾಳ ಕೃತ್ಯಗಳು ಹಂತ ಹಂತವಾಗಿ ಬಹಿರಂಗವಾಗುತ್ತಿವೆ. ಪ್ರಕರಣದ ತನಿಖೆಯಲ್ಲಿ ದಿನದಿಂದ ದಿನಕ್ಕೆ ಹೊಸ ಮಾಹಿತಿಗಳು ಹೊರಬರುತ್ತಿದ್ದು, ಸಂತ್ರಸ್ತ ಯುವತಿಗೆ ಹಲವಾರು ಬಾರಿ ಗರ್ಭಪಾತದ ಮಾತ್ರೆಗಳನ್ನು ಬಲವಂತವಾಗಿ ಸೇವಿಸಲು ಒತ್ತಾಯಿಸಿದ್ದಾನೆ ಎಂಬ ಗಂಭೀರ ಆರೋಪ ಬೆಳಕಿಗೆ ಬಂದಿದೆ.

ಪೊಲೀಸರು ಆರೋಪಿ ಸಮೀರ್‌ನ ಮೊಬೈಲ್ ಫೋನ್ ಪರಿಶೀಲಿಸಿದ ವೇಳೆ ಅತ್ಯಂತ ಆಘಾತಕಾರಿ ಸಾಕ್ಷ್ಯಗಳು ಪತ್ತೆಯಾಗಿವೆ. ಸಂತ್ರಸ್ತೆ ಗರ್ಭಪಾತದ ಮಾತ್ರೆ ಸೇವಿಸುತ್ತಿರುವ ವಿಡಿಯೋಗಳನ್ನು ಆತ ತನ್ನ ಮೊಬೈಲ್‌ನಲ್ಲಿ ಸಂಗ್ರಹಿಸಿಕೊಂಡಿದ್ದಾನೆ ಎಂಬುದು ತಿಳಿದುಬಂದಿದೆ. ಪ್ರತಿ ಬಾರಿ ದೌರ್ಜನ್ಯ ಎಸಗಿದ ಬಳಿಕ, ಆಕೆ ಮಾತ್ರೆ ಸೇವಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳಲು ವಿಡಿಯೋ ದಾಖಲಿಸಿ ಕಳುಹಿಸುವಂತೆ ಒತ್ತಾಯಿಸುತ್ತಿದ್ದನೆಂಬುದು ತನಿಖೆಯಿಂದ ಬಹಿರಂಗವಾಗಿದೆ.

ಪ್ರಕರಣದ ಹಿನ್ನೆಲೆ ಪ್ರಕಾರ, ಸಂತ್ರಸ್ತ ಯುವತಿ ಜಿಮ್‌ಗೆ ಹೋಗುತ್ತಿದ್ದ ಸಂದರ್ಭದಲ್ಲಿ ಸಮೀರ್ ಪರಿಚಯವಾಗಿದ್ದನು. 2025ರ ಆಗಸ್ಟ್ 16ರಂದು ಯುವತಿಯನ್ನು ತನ್ನ ಮನೆಗೆ ಕರೆಸಿಕೊಂಡು, ಜ್ಯೂಸ್‌ನಲ್ಲಿ ಮದಕ ಪದಾರ್ಥ ಬೆರೆಸಿ ಕುಡಿಸಿ ಪ್ರಜ್ಞೆ ತಪ್ಪಿಸಿ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ವೇಳೆ ಆ ಕೃತ್ಯವನ್ನು ವಿಡಿಯೋ ಮಾಡಿಸಿಕೊಂಡು, ಅದನ್ನೇ ಆಧಾರವಾಗಿ ಬಳಸಿಕೊಂಡು ಬೆದರಿಕೆ ಹಾಕುತ್ತಾ ನಿರಂತರವಾಗಿ ದೌರ್ಜನ್ಯ ಎಸಗುತ್ತಿದ್ದನೆಂಬ ಆರೋಪ ಕೇಳಿಬಂದಿದೆ.

ಇದೇ ವೇಳೆ, ಸಮೀರ್‌ನ ಮೊಬೈಲ್ ಚಾಟ್‌ಗಳು ಮತ್ತಷ್ಟು ಗಂಭೀರ ಅನುಮಾನಗಳಿಗೆ ಕಾರಣವಾಗಿವೆ. ಜಿಮ್‌ಗೆ ಬರುವ ಹಲವಾರು ಯುವತಿಯರೊಂದಿಗೆ ಆತ ಸ್ನೇಹ ಬೆಳೆಸಿ, ಅವರನ್ನು ಟಾರ್ಗೆಟ್ ಮಾಡುತ್ತಿದ್ದನೆಂಬ ಸುಳಿವುಗಳು ಲಭ್ಯವಾಗಿವೆ. ಹಲವಾರು ಯುವತಿಯರೊಂದಿಗೆ ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕರಣದ ವ್ಯಾಪ್ತಿ ಇನ್ನಷ್ಟು ವಿಸ್ತರಿಸುವ ಸಾಧ್ಯತೆ ಇದೆ. ಜೊತೆಗೆ, ಆತ ಅಶ್ಲೀಲ ಮತ್ತು ನಿಷೇಧಿತ ವೆಬ್‌ಸೈಟ್‌ಗಳನ್ನು ವೀಕ್ಷಿಸುತ್ತಿದ್ದ ವಿಚಾರವೂ ಬ್ರೌಸಿಂಗ್ ಹಿಸ್ಟರಿಯಿಂದ ಬಹಿರಂಗವಾಗಿದೆ.

ಪ್ರಸ್ತುತ ಈ ಪ್ರಕರಣ ಸಂಬಂಧ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ (BNS) ಸೆಕ್ಷನ್ 64(1), 351 ಮತ್ತು 123ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಗಂಭೀರವಾಗಿ ಮುಂದುವರಿಸಿದ್ದಾರೆ. ಆರೋಪಿ ಸಮೀರ್ ಸದ್ಯ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಈ ಪ್ರಕರಣವು ಮಹಿಳಾ ಸುರಕ್ಷತೆ ಮತ್ತು ನಂಬಿಕೆಯ ದುರುಪಯೋಗದ ಬಗ್ಗೆ ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

error: Content is protected !!