ಬೆಂಗಳೂರಲ್ಲಿ ಪತಿ ಕಳೆದುಕೊಂಡವರು ಅಥವಾ ಗಂಡನಿಂದ ದೂರವಾದ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಮೋಸ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಮದುವೆ ಮಾಡುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ, ನಂತರ ಹಣ ಹಾಗೂ ಚಿನ್ನ ಪಡೆದು ವಂಚನೆ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಸೂರ್ಯ ಮ್ಯಾನೇಜ್ಮೆಂಟ್ ಸರ್ವಿಸ್‌ನ ಎಂಡಿ ರಾಮಾಂಜಿ (38) ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದ್ದು, ಆತನ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಆರೋಪಿ ಅಪಾರ್ಟ್‌ಮೆಂಟ್‌ಗಳಲ್ಲಿ ಸೆಕ್ಯೂರಿಟಿ ಹಾಗೂ ಹೌಸ್‌ಕೀಪಿಂಗ್ ಕೆಲಸಗಳನ್ನು ಒದಗಿಸುತ್ತಿದ್ದು, ತನ್ನ ಸಂಸ್ಥೆಯಲ್ಲಿ ಸುಮಾರು 60ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದರು. ಕೆಲಸಕ್ಕೆ ಬರುವ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಅವರೊಂದಿಗೆ ಸ್ನೇಹ ಬೆಳೆಸುತ್ತಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಗ್ರಾಮಗಳಿಂದ ಬೆಂಗಳೂರಿಗೆ ಉದ್ಯೋಗಕ್ಕಾಗಿ ಬರುವ ಮಹಿಳೆಯರು, ವಿಶೇಷವಾಗಿ ಪತಿ ಕಳೆದುಕೊಂಡವರು ಅಥವಾ ವಿಚ್ಛೇದನಗೊಂಡವರು, ಆತನ ಮೋಸದ ಬಲೆಗೆ ಬೀಳುತ್ತಿದ್ದರು. ಅವರಿಗೆ ಜೀವನ ಕೊಡುತ್ತೇನೆ ಎಂದು ನಂಬಿಸಿ, ದೈಹಿಕ ಸಂಬಂಧ ಬೆಳೆಸಿ ನಂತರ ಹಣ ಹಾಗೂ ಆಭರಣಗಳನ್ನು ಕಸಿದುಕೊಳ್ಳುತ್ತಿದ್ದಾನೆ ಎಂದು ಒಬ್ಬ ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಪ್ರಕರಣವು ಉದ್ಯೋಗದ ಹೆಸರಿನಲ್ಲಿ ನಡೆಯುತ್ತಿರುವ ಮೋಸಗಳ ಬಗ್ಗೆ ಎಚ್ಚರಿಕೆ ನೀಡುವಂತಿದ್ದು, ಮಹಿಳೆಯರು ಇಂತಹ ವ್ಯಕ್ತಿಗಳಿಂದ ಜಾಗರೂಕರಾಗಿರಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ.
