ಮಧ್ಯಪ್ರದೇಶ: ಪತಿಯೊಂದಿಗೆ ಜೀವನ ನಡೆಸಲು ಸಾಧ್ಯವಿಲ್ಲವೆಂದು ಹೇಳಿದ 19 ವರ್ಷದ ಯುವತಿಗೆ ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಆಕೆಗೆ ತನ್ನ ಪ್ರಿಯಕರನೊಂದಿಗೆ ಬದುಕಲು ಅವಕಾಶ ಕಲ್ಪಿಸಿದೆ.
ಈ ಪ್ರಕರಣದಲ್ಲಿ ಅವಧೇಶ್ ಎಂಬುವವರು ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ, ತಮ್ಮ ಪತ್ನಿಯನ್ನು ಅನುಜ್ ಕುಮಾರ್ ಎಂಬ ವ್ಯಕ್ತಿ ಅಕ್ರಮವಾಗಿ ಬಂಧಿಸಿ ಇಟ್ಟಿದ್ದಾನೆ ಎಂದು ಆರೋಪಿಸಿದ್ದರು. ನ್ಯಾಯಾಲಯದ ನಿರ್ದೇಶನದ ಮೇರೆಗೆ ಪೊಲೀಸರು ಯುವತಿಯನ್ನು ಪತ್ತೆಹಚ್ಚಿ, ಸಾಂತ್ವನ ಕೇಂದ್ರದಲ್ಲಿ ಇರಿಸಿ ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.
ನ್ಯಾಯಾಧೀಶರ ಮುಂದೆ ಯುವತಿ ತನ್ನ ಮನದ ಮಾತು ಹೊರಹಾಕಿದಳು. “ನನಗೆ 19 ವರ್ಷ, ಪತಿಗೆ 40 ವರ್ಷ. ನಮ್ಮಿಬ್ಬರ ನಡುವೆ 21 ವರ್ಷದ ವಯೋಮಾನದ ಅಂತರವಿದೆ. ನಮ್ಮ ಸಂಬಂಧದಲ್ಲಿ ಯಾವುದೇ ಹೊಂದಾಣಿಕೆ ಇರಲಿಲ್ಲ. ನನ್ನ ವೈವಾಹಿಕ ಜೀವನ ಸಂತೋಷಕರವಾಗಿರಲಿಲ್ಲ,” ಎಂದು ಆಕೆ ಹೇಳಿಕೊಂಡಳು. ಜೊತೆಗೆ, ತಾನು ಪ್ರಿಯಕರ ಅನುಜ್ ಕುಮಾರ್ ಜೊತೆ ಬದುಕಲು ಬಯಸುವುದಾಗಿ ಸ್ಪಷ್ಟಪಡಿಸಿದಳು.
ಯುವತಿಯನ್ನು ಮನವೊಲಿಸಲು ನ್ಯಾಯಾಲಯವು ಕೌನ್ಸೆಲಿಂಗ್‌ಗೆ ಆದೇಶಿಸಿತು. ಆದರೆ ಕೌನ್ಸೆಲಿಂಗ್ ನಂತರವೂ ಆಕೆ ತನ್ನ ನಿರ್ಧಾರವನ್ನು ಬದಲಿಸದೇ ಪ್ರಿಯಕರನೊಂದಿಗೆ ಜೀವನ ನಡೆಸುವ ಆಸೆಯನ್ನು ಪುನರುಚ್ಚರಿಸಿದಳು. ಪ್ರಿಯಕರ ಅನುಜ್ ಕುಮಾರ್ ಕೂಡ ಯುವತಿಯ ಸುರಕ್ಷತೆ ಹಾಗೂ ಜವಾಬ್ದಾರಿಯನ್ನು ಹೊರುವುದಾಗಿ ನ್ಯಾಯಾಲಯಕ್ಕೆ ಭರವಸೆ ನೀಡಿದನು.
ಈ ಹಿನ್ನೆಲೆ ನ್ಯಾಯಮೂರ್ತಿಗಳಾದ ಆನಂದ್ ಪಾಠಕ್ ಮತ್ತು ಪುಷ್ಪೇಂದ್ರ ಯಾದವ್ ಅವರ ಪೀಠವು, “ಯುವತಿ ವಯಸ್ಕಳಾಗಿರುವುದರಿಂದ ಆಕೆಯ ಸ್ವತಂತ್ರ ನಿರ್ಧಾರವೇ ಪ್ರಮುಖ. ಆಕೆ ಯಾವುದೇ ಒತ್ತಡ ಅಥವಾ ಅಕ್ರಮ ಬಂಧನದಲ್ಲಿಲ್ಲ ಎಂಬುದು ಸ್ಪಷ್ಟವಾಗಿದೆ” ಎಂದು ಅಭಿಪ್ರಾಯಪಟ್ಟಿತು. ವಯಸ್ಕರಿಗೆ ತಮ್ಮ ಇಚ್ಛೆಯಂತೆ ಬದುಕುವ ಹಕ್ಕು ಇದೆ ಎಂದು ಹೇಳಿ, ಆಕೆಯನ್ನು ಪ್ರಿಯಕರನ ಜೊತೆ ಹೋಗಲು ಅನುಮತಿಸಿತು.
ಇದಲ್ಲದೆ, ಯುವತಿಯ ಸುರಕ್ಷತೆಗಾಗಿ ನ್ಯಾಯಾಲಯವು ವಿಶೇಷ ಸೂಚನೆ ನೀಡಿದ್ದು, ಮುಂದಿನ ಆರು ತಿಂಗಳ ಕಾಲ “ಶೌರ್ಯ ದೀದಿ” ಯೋಜನೆಯಡಿ ಮಹಿಳಾ ಅಧಿಕಾರಿಗಳು ಆಕೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಕ್ಷೇಮ ವಿಚಾರಣೆ ನಡೆಸಬೇಕು ಎಂದು ಆದೇಶಿಸಿದೆ.
