ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಪೊಲೀಸ್ ಹೆಡ್‌ಕಾನ್ಸ್‌ಟೇಬಲ್‌ ಒಬ್ಬರ ಅಸಭ್ಯ ವರ್ತನೆ ಹಾಗೂ ಹಲ್ಲೆ ಪ್ರಕರಣ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಕರ್ತವ್ಯ ನಿರತ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಮೇಲೆ ಚಪ್ಪಲಿ ಮತ್ತು ಹೆಲ್ಮೆಟ್‌ನಿಂದ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ, ಕೂಡ್ಲಿಗಿ ಠಾಣೆಯ ಹೆಡ್‌ಕಾನ್ಸ್‌ಟೇಬಲ್ ಮಂಜುನಾಥ್ ಅವರನ್ನು ಇಲಾಖೆಯಿಂದ ಅಮಾನತುಗೊಳಿಸಲಾಗಿದೆ.

ಘಟನೆ ಎರಡು ದಿನಗಳ ಹಿಂದೆ ನಡೆದಿದೆ. ಹರಿಹರ ಘಟಕದ ಬಸ್ ಬಳ್ಳಾರಿಗೆ ತೆರಳುತ್ತಿದ್ದ ವೇಳೆ, ಕೊಟ್ಟೂರಿನಿಂದ ಕೂಡ್ಲಿಗಿ ಕಡೆ ಸಾಗುತ್ತಿದ್ದ ಬಸ್‌ ಮಲ್ಲನಾಯಕಹಳ್ಳಿ ಹತ್ತಿರ ಬಂದಾಗ, ಬಸ್ ಚಾಲಕ ರಾಮಲಿಂಗಪ್ಪ ಎದುರಿಗೆ ಬರುತ್ತಿದ್ದ ಕಾರಿನ ಕಾರಣದಿಂದ ಬೈಕ್ ಹಿಂದಿಕ್ಕುವ ವೇಳೆ ಎಡಕ್ಕೆ ಸರಿದಿದ್ದಾರೆ. ಈ ಸಮಯದಲ್ಲಿ ಬಸ್ ಹಿಂಭಾಗ ಬೈಕ್ ಹ್ಯಾಂಡಲ್‌ಗೆ ಸ್ವಲ್ಪ ಮಟ್ಟಿಗೆ ತಾಗಿದೆಯೆಂಬುದು ಆರೋಪ. ಬೈಕ್‌ನಲ್ಲಿ ಕೂಡ್ಲಿಗಿ ಠಾಣೆಯ ಹೆಡ್‌ಕಾನ್ಸ್‌ಟೇಬಲ್ ಮಂಜುನಾಥ ಹಾಗೂ ಮತ್ತೊಬ್ಬ ಕಾನ್ಸ್‌ಟೇಬಲ್ ಸವಾರರಾಗಿದ್ದರು.

ಘಟನೆ ಬಳಿಕ ಗಜಾಪೂರದ ಬಳಿ ಬಸ್ ನಿಲ್ಲಿಸಿದ ಮಂಜುನಾಥ, ಯಾವುದೇ ವಿಚಾರಣೆ ಮಾಡದೇ ಬಸ್ ಒಳಗೆ ನುಗ್ಗಿ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಕಾಲಿನಲ್ಲಿದ್ದ ಚಪ್ಪಲಿ ತೆಗೆದು ಹೊಡೆದಿದ್ದಾರೆ. ಅಲ್ಲದೆ ಚಾಲಕನ ಜೇಬಿನಲ್ಲಿದ್ದ ಮೊಬೈಲ್ ಕಿತ್ತುಕೊಂಡು “ಸ್ಟೇಷನ್‌ಗೆ ಬಾ” ಎಂದು ಬೆದರಿಕೆ ಹಾಕಿದ್ದಾರೆ. ಚಾಲಕ ಮೊಬೈಲ್ ಹಿಂತಿರುಗಿಸುವಂತೆ ವಿನಂತಿಸಿದಾಗ, ಮಂಜುನಾಥ ಕೈಯಲ್ಲಿದ್ದ ಹೆಲ್ಮೆಟ್‌ನಿಂದ ಮತ್ತೊಮ್ಮೆ ಹಲ್ಲೆ ನಡೆಸಿದ್ದಾರೆ.

ಘಟನೆಯ ನಂತರ ಚಾಲಕ ರಾಮಲಿಂಗಪ್ಪ ಕೂಡ್ಲಿಗಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮಂಜುನಾಥ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಘಟನೆಯ ಸಮಯದಲ್ಲಿ ಮಂಜುನಾಥ ಕರ್ತವ್ಯದಲ್ಲಿರದಿದ್ದರೂ, ಕರ್ತವ್ಯ ನಿರತ ಸರ್ಕಾರಿ ನೌಕರರ ಮೇಲೆ ಹಲ್ಲೆ ನಡೆಸಿರುವುದರಿಂದ ಸಾರ್ವಜನಿಕರು ಹಾಗೂ ಸಾರಿಗೆ ನೌಕರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು, ಆರೋಪಿಯನ್ನು ತಕ್ಷಣ ಬಂಧಿಸಿ, ಸೇವೆಯಿಂದ ವಜಾ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಸಾರ್ವಜನಿಕ ಒತ್ತಡ ಮತ್ತು ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಪೊಲೀಸ್ ಇಲಾಖೆ ಶಿಸ್ತಿನ ಕ್ರಮವಾಗಿ ಮಂಜುನಾಥ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿದೆ. ಈ ಕ್ರಮಕ್ಕೆ ಬೆಂಬಲ ವ್ಯಕ್ತವಾಗಿದ್ದು, “ರೌಡಿಯಂತೆ ವರ್ತಿಸಿದ ಪೊಲೀಸರಿಗೆ ಇದು ಸರಿಯಾದ ಪಾಠ” ಎಂದು ಜನತೆ ಪ್ರತಿಕ್ರಿಯಿಸಿದ್ದಾರೆ.

***

ಭ್ರಷ್ಟರ ಬೇಟೆ ಪತ್ರಿಕೆಗೆ ರಾಜ್ಯಾದ್ಯಂತ ವರದಿಗಾರರು ಬೇಕಾಗಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 80 88070392

Related News

error: Content is protected !!