
ಗೌರಿಬಿದನೂರು (ಆ.2): ನಗರದ ಹೊರವಲಯ ಬರ್ಜಾನುಕುಂಟೆ ಗೇಟ್ ಬಳಿ ಶುಕ್ರವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಯುವಕರು ದುರ್ಮರಣಕ್ಕೊಳಗಾದ ದುರ್ಘಟನೆ ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು ದಿಕ್ಕೆಯಿಂದ ಗೌರಿಬಿದನೂರಿಗೆ ಬರುತ್ತಿದ್ದ ವಿನಾಯಕನಗರ ನಿವಾಸಿ ಸುಬ್ರಮಣ್ಯ (27) ಮತ್ತು ಕಲ್ಲಿನಾಯಕನಹಳ್ಳಿ ಗ್ರಾಮದ ನಂದೀಶಪ್ಪ ಅಲಿಯಾಸ್ ಲಂಕೇಶ್ (28) ಅವರು ಓಡಿಸುತ್ತಿದ್ದ ಎರಡು ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ, ಸ್ಥಳದಲ್ಲೇ ಇಬ್ಬರೂ ಮೃತಪಟ್ಟಿದ್ದಾರೆ.
ಅಪಘಾತದ ಸಂದರ್ಭದಲ್ಲಿ ಹರ್ಷನ ಜೊತೆಗೆ ಹಿಂಬದಿ ಸೀಟಿನಲ್ಲಿ ಪ್ರಯಾಣಿಸುತ್ತಿದ್ದ ದೀಪಕ್ (28) ಗಂಭೀರವಾಗಿ ಗಾಯಗೊಂಡು, ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕೊಂಡೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಮೃತದೇಹಗಳನ್ನು ಗೌರಿಬಿದನೂರು ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಲಾಗಿದೆ. ಅಪಘಾತದ ಕುರಿತು ಮಾಹಿತಿ ತಿಳಿದ ನಂತರ ಮಂಚೇನಹಳ್ಳಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ. ವರದಿ: ಅವಿನಾಶ್