
ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ 3.6 ಕೋಟಿ ರೂಪಾಯಿ ವೆಚ್ಚ ಮಾಡಿರುವು ಆದರೆ, ನಿಜವಾದ ಸಮೀಕ್ಷೆ ನಡೆಯದೆ, ಬಿಬಿಎಂಪಿ ಸಿಬ್ಬಂದಿ ಮನೆ ಮನೆಗೆ ತೆರಳದೆ ಕೇವಲ ‘ಸರ್ವೇ ಪೂರ್ಣ’ ಎಂಬ ಸ್ಟಿಕ್ಕರ್ ಅಂಟಿಸಿ ಹೋಗುತ್ತಿರುವುದಕ್ಕೆ ಸಾರ್ವಜನಿಕ ಆಕ್ರೋಶ ಹೊರಹೊಮ್ಮಿದೆ.
ಬೆಂಗಳೂರು ನಗರದ ಹಲವು ಕಡೆ, ವಿಶೇಷವಾಗಿ ಥಣಿಸಂದ್ರ ಸೇರಿದಂತೆ ಹಲವೆಡೆ, ಸಮೀಕ್ಷೆ ನಡೆದೇ ಇಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಕೆಲವು ಸ್ಥಳಗಳಲ್ಲಿ ಮನೆಗಳಲ್ಲಷ್ಟೇ ಅಲ್ಲದೆ, ಬೇಕರಿ ಹಾಗೂ ಕಾಂಡಿಮೆಂಟ್ಸ್ ಅಂಗಡಿಗಳ ಮೇಲೂ ‘ಜಾತಿ ಸಮೀಕ್ಷೆ ಪೂರ್ಣ’ ಎಂಬ ಸ್ಟಿಕ್ಕರ್‌ಗಳು ಅಂಟಿಸಿರುವುದು ಬೆಳಕಿಗೆ ಬಂದಿದೆ. ಇದು ಜನರ ಕೋಪಕ್ಕೆ ಕಾರಣವಾಗಿದ್ದು, “ಅಂಗಡಿಯವರಿಗೆ ಜಾತಿಯ ಕುರಿತು ಹೇಗೆ ಮಾಹಿತಿ ಸಂಗ್ರಹಿಸುತ್ತಾರೆ?” ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಸಮೀಕ್ಷೆಯ ವಿಷಯದಲ್ಲಿ ಅಸಡ್ಡೆಪೂರಿತ ವಹಿವಾಟು ನಡೆಯುತ್ತಿರುವುದನ್ನು ತೋರಿಸುವ ಫೋಟೋಗಳು ಈಗ ವೈರಲ್ ಆಗುತ್ತಿವೆ. ಈ ಮೂಲಕ ಸರ್ಕಾರದ ಭದ್ರತೆ ಮತ್ತು ಕಾರ್ಯಪದ್ಧತಿಯ ಮೇಲೂ ಪ್ರಶ್ನಾರ್ಥಕ ಚಿಹ್ನೆ ಮೂಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸ್ಥಳೀಯ ನಿವಾಸಿಗಳು, “ಇದು ಸಾರ್ವಜನಿಕ ಹಣದ ನಿಷ್ಫಲ ಬಳಕೆ. ಸಮೀಕ್ಷೆಯ ಉದ್ದೇಶವನ್ನು ನಿರ್ಲಕ್ಷಿಸುವ, ಕೇವಲ ಕೆಲಸ ಮುಗಿಸಿದ ನಾಟಕವನ್ನೇ ಬಿಬಿಎಂಪಿ ಮಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ವೇ ನಿಜವಾಗಿಯೂ ನಡೆದಿದೆಯೇ? ಅಥವಾ ಕೇವಲ ಪಟ್ಟಿ ಪೂರ್ಣವಾಯಿತೆಂದು ತೋರಿಸಲು ಸ್ಟಿಕ್ಕರ್‌ಗಳ ಮೂಲಕ ಲೋಕದೃಷ್ಟಿ ಮಾಯಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಅಧಿಕಾರಿಗಳು ಸ್ಪಷ್ಟನೆ ನೀಡಬೇಕಾಗಿದೆ.