
ಸುರತ್ಕಲ್, ಜು.13: ಎಲ್‌ಪಿಜಿ ಅನಿಲವನ್ನು ತುಂಬಿಕೊಳ್ಳಲು ತೆರಳುತ್ತಿದ್ದ ಟ್ಯಾಂಕರ್ ಚಾಲಕರೊಬ್ಬರು ದಿಢೀರ್ ಅನಾರೋಗ್ಯಕ್ಕೆ ಒಳಗಾಗಿ ರಕ್ತ ವಾಂತಿ ಮಾಡಿದ ಘಟನೆ ಭಾನುವಾರ ಮಧ್ಯಾಹ್ನ ಕುಳಾಯಿ ರೈಲ್ವೆ ಸೇತುವೆ ಬಳಿ ನಡೆದಿದೆ.
ಹೆಚ್‌ಪಿಸಿಎಲ್ ಘಟಕದಿಂದ ಅನಿಲ ಭರ್ತಿಗೆ ಹೊರಟಿದ್ದಾಗ, ಚಾಲಕನಿಗೆ ಅಪ್ರತ್ಯಾಶಿತವಾಗಿ ತೀವ್ರ ಅಸ್ವಸ್ಥತೆ ಉಂಟಾಗಿ ಅವರು ಜೋರಾಗಿ ರಕ್ತ ವಾಂತಿ ಮಾಡಿದರು. ತಕ್ಷಣ ತನ್ನ ಸಮಯ ಪ್ರಜ್ಞೆ ಎಣಿಸಿ ಚಾಲಕನು ಹ್ಯಾಂಡ್‌ಬ್ರೇಕ್ ಬಳಸಿ ವಾಹನವನ್ನು ಸುರಕ್ಷಿತವಾಗಿ ನಿಲ್ಲಿಸಿದ ಪರಿಣಾಮ ಭಾರೀ ಅಪಘಾತವೊಂದು ತಪ್ಪಿತು.
ಆಘಾತಕರ ಸ್ಥಿತಿಯಲ್ಲಿ ಪ್ರಜ್ಞೆ ತಪ್ಪಿದ್ದ ಚಾಲಕನನ್ನು ಸ್ಥಳೀಯರು ತಕ್ಷಣವೇ ಆಂಬುಲೆನ್ಸ್ ಮೂಲಕ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಘಟನೆಯಿಂದಾಗಿ ಕೆಲಕಾಲ ರಸ್ತೆಯಲ್ಲಿ ಆತಂಕದ ವಾತಾವರಣ ಕಂಡುಬಂದಿತ್ತು.
ಚಾಲಕನ ಜವಾಬ್ದಾರಿಯುತ ನಡೆ, ಅವಶ್ಯಕ ತ್ವರಿತ ಕ್ರಮಗಳಿಂದಾಗಿ ಅನೇಕ ಜೀವಹಾನಿ ಸಂಭವಿಸದಂತಾಯಿತು. ಸ್ಥಳೀಯರು ಮತ್ತು ಪೊಲೀಸರು ಈ ಸಾಹಸದ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.