ಬೆಂಗಳೂರುದಲ್ಲಿ ನಿರುದ್ಯೋಗಿ ಯುವಕರನ್ನೇ ಗುರಿಯಾಗಿಸಿಕೊಂಡು ಕೋರ್ಟ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಜೈಸನ್ ಡಿಸೋಜಾ ಮತ್ತು ಲವೀನಾ ಎಂದು ಗುರುತಿಸಲಾಗಿದೆ. ಇವರು ನಿರುದ್ಯೋಗಿಗಳು ಹಾಗೂ ಖಾಸಗಿ ಕಂಪನಿಗಳಲ್ಲಿ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದ ಯುವಕರನ್ನು ಟಾರ್ಗೆಟ್ ಮಾಡಿ, ಕೋರ್ಟ್‌ನಲ್ಲಿ ಡಿ-ಗ್ರೂಪ್ ಹುದ್ದೆ ಕೊಡಿಸುತ್ತೇವೆ ಎಂದು ನಂಬಿಸುತ್ತಿದ್ದರು.
ಈ ಮೂಲಕ ಒಬ್ಬೊಬ್ಬರಿಂದ 10 ಲಕ್ಷದಿಂದ 25 ಲಕ್ಷ ರೂಪಾಯಿವರೆಗೆ ಹಣ ವಸೂಲಿ ಮಾಡುತ್ತಿದ್ದರು. ಹಲವು ಮಂದಿಯಿಂದ ಹಣ ಪಡೆದು ಉದ್ಯೋಗ ನೀಡದೆ ಮೋಸ ಮಾಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಬಸವೇಶ್ವರನಗರ ಸೇರಿದಂತೆ ವಿವಿಧ ಠಾಣೆಗಳಲ್ಲಿ ಆರೋಪಿಗಳ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಪ್ರಾಥಮಿಕ ತನಿಖೆಯ ಪ್ರಕಾರ, 500ಕ್ಕೂ ಹೆಚ್ಚು ಜನರಿಂದ 25 ಕೋಟಿ ರೂಪಾಯಿಗೂ ಅಧಿಕ ಹಣ ದೋಚಿರುವ ಶಂಕೆ ವ್ಯಕ್ತವಾಗಿದೆ.
ಇದೇ ದಂಪತಿ 2024ರಲ್ಲೂ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ಹೇಳಿ ವಂಚನೆ ನಡೆಸಿ ಜೈಲು ಸೇರಿದ್ದರು. ಆದರೆ ಜೈಲಿನಿಂದ ಬಿಡುಗಡೆಯಾದ ಬಳಿಕವೂ ತಮ್ಮ ಕೃತ್ಯಗಳನ್ನು ಮುಂದುವರೆಸಿರುವುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪ್ರಸ್ತುತ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ಮುಂದುವರೆಸಿದ್ದು, ಇನ್ನಷ್ಟು ಮಾಹಿತಿ ಹೊರಬರುವ ಸಾಧ್ಯತೆ ಇದೆ.
