
ಧರ್ಮಸ್ಥಳ (ದಕ್ಷಿಣ ಕನ್ನಡ): ಧರ್ಮಸ್ಥಳದಲ್ಲಿ ಹಲವಾರು ಹೆಣಗಳನ್ನು ಹೂತು ಹಾಕಲಾಗಿದೆ ಎಂಬ ಗಂಭೀರ ಆರೋಪದ ಕುರಿತಂತೆ ಸಾಕ್ಷಿ ನೀಡಿದ ವ್ಯಕ್ತಿಯ ದೂರಿಗೆ ಸಂಬಂಧಿಸಿದಂತೆ, ಕೃತಕ ಬುದ್ಧಿಮತ್ತೆ (ಎಐ) ಮೂಲಕ ಸುಳ್ಳು ಮಾಹಿತಿಗಳನ್ನು ತಯಾರಿಸಿ ವೀಡಿಯೋ ರೂಪದಲ್ಲಿ ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡಿದ ಆರೋಪದ ಮೇರೆಗೆ, ಯೂಟ್ಯೂಬರ್ ಸಮೀರ್ ಎಂ.ಡಿ ವಿರುದ್ಧ ಪ್ರಕರಣ ದಾಖಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಪ್ರಕಾರ, ಈ ವೀಡಿಯೋದಲ್ಲಿ ಪ್ರಕರಣದ ಮೂಲ ದಾಖಲೆಗಳು ಮತ್ತು ಸಾಕ್ಷ್ಯಾಧಾರಗಳ ಹೊರತಾಗಿ, ಸಾಕ್ಷಿದಾರರ ಬಗ್ಗೆ ಅಸತ್ಯ ಹಾಗೂ ತಪ್ಪು ಮಾಹಿತಿಗಳನ್ನು ಹರಡಲಾಗಿದೆ. ಎಐ ಮೂಲಕ ನಿರ್ಧಿಷ್ಟ ಉದ್ದೇಶದೊಂದಿಗೆ ಸೃಷ್ಟಿಸಲಾದ ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಡಿದ್ದು, ಸಾರ್ವಜನಿಕರಲ್ಲಿ ಭಾವನಾತ್ಮಕ ಉದ್ರೇಕ ಉಂಟಾಗುವಂತ ಪರಿಸ್ಥಿತಿಯನ್ನುಂಟುಮಾಡಿದೆ.
ಈ ಹಿನ್ನಲೆಯಲ್ಲಿ, ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸಮೀರ್ ಎಂ.ಡಿ ವಿರುದ್ಧ ಭಾರತ ರಾಷ್ಟ್ರೀಯ ಅಪರಾಧ ಸಂಹಿತೆ (BNS) ಸೆಕ್ಷನ್‌ಗಳಾದ 192 (ತಪ್ಪು ಮಾಹಿತಿಯ ಹರಡುವಿಕೆ), 240 (ಸಾಮಾನ್ಯ ಭದ್ರತೆಗೆ ಧಕ್ಕೆಯಾಗುವಂತಹ ಕ್ರಿಯೆ), ಮತ್ತು 353(1)(b) (ಸಾಮಾಜಿಕ ಶಾಂತಿ ಹಾಳುಮಾಡುವ ಉದ್ದೇಶದ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರು ಈ ಸಂಬಂಧ ಮುಂದಿನ ತನಿಖೆ ಮುಂದುವರೆಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಮಾಹಿತಿಗಳನ್ನು ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.