ಲಕ್ನೋ, ಆಗಸ್ಟ್ 10 – ಅಂತರರಾಷ್ಟ್ರೀಯ ಪೊಲೀಸ್ ಹಾಗೂ ಅಪರಾಧ ತನಿಖಾ ಬ್ಯೂರೊ ಎಂಬ ಹೆಸರಿನಲ್ಲಿ ನಕಲಿ ಕಚೇರಿ ನಡೆಸುತ್ತಿದ್ದ ಆರೋಪದಲ್ಲಿ ಗೌತಮ್ ಬುದ್ಧ ನಗರದ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.

ಪೊಲೀಸ್ ಮಾಹಿತಿ ಪ್ರಕಾರ, ಆರೋಪಿಗಳು ಸರಕಾರಿ ಅಧಿಕಾರಿಗಳಂತೆ ನಟಿಸಿ ಸಾರ್ವಜನಿಕರಿಂದ ಹಣ ಸುಲಿಗೆ ಮಾಡುತ್ತಿದ್ದರು. ಈ ನಿಟ್ಟಿನಲ್ಲಿ ಅವರು ನಕಲಿ ದಾಖಲೆಗಳು, ಕೃತಕ ಗುರುತಿನ ಚೀಟಿಗಳು, ಪೊಲೀಸ್ ಶೈಲಿಯ ಲಾಂಛನಗಳು ಹಾಗೂ ಲೋಗೋಗಳನ್ನು ಬಳಸಿಕೊಂಡಿದ್ದರು.

ಖಚಿತ ಸುಳಿವಿನ ಆಧಾರದ ಮೇಲೆ, ಶನಿವಾರ ತಡರಾತ್ರಿ ನೋಯ್ಡಾದ ಸೆಕ್ಟರ್-70ರ ಬಿಎಸ್ 136ರಲ್ಲಿ ಇರುವ ಕಟ್ಟಡದ ಮೇಲೆ ಪೊಲೀಸರು ದಾಳಿ ನಡೆಸಿದರು. ಅಲ್ಲಿ ಅಧಿಕೃತ ಸರ್ಕಾರಿ ಕಚೇರಿಯಂತೆಯೇ ಅಲಂಕರಿಸಿದ ನಕಲಿ ಕಚೇರಿ ಪತ್ತೆಯಾಯಿತು.

ಪೊಲೀಸರ ಹೇಳಿಕೆಯಲ್ಲಿ, ಆರೋಪಿಗಳು ಬುಡಕಟ್ಟು ವ್ಯವಹಾರಗಳ ಸಚಿವಾಲಯ, ಆಯುಷ್ ಸಚಿವಾಲಯ ಹಾಗೂ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ನಕಲಿ ಪ್ರಮಾಣ ಪತ್ರಗಳನ್ನು ಪ್ರದರ್ಶಿಸುತ್ತಿದ್ದರು. ಜೊತೆಗೆ ಇಂಟರ್‌ಪೋಲ್, ಅಂತರರಾಷ್ಟ್ರೀಯ ಮಾನವ ಹಕ್ಕು ಆಯೋಗ ಹಾಗೂ ಯುರೇಷಿಯಾ ಪೋಲ್‌ಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಹೇಳಿಕೊಂಡಿದ್ದರು. ಬ್ರಿಟನ್‌ನಲ್ಲಿ ಕಚೇರಿ ಇದೆ ಎಂಬ ಸುಳ್ಳು ಪ್ರಚಾರವೂ ನಡೆಸಿದ್ದರು.

ಆನ್‌ಲೈನ್ ವೆಬ್‌ಸೈಟ್ ಮೂಲಕ ದೇಣಿಗೆ ಸಂಗ್ರಹಿಸಲು, ವಿವಿಧ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಮಾಣ ಪತ್ರಗಳನ್ನು ಪ್ರದರ್ಶಿಸುತ್ತಿದ್ದರು. ಜನರನ್ನು ಪ್ರಭಾವಿತಗೊಳಿಸಲು ಅವರು ಹಲವಾರು ಪತ್ರಿಕೆಗಳ ಗುರುತಿನ ಚೀಟಿಗಳು, ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಗುರುತಿನ ಕಾರ್ಡ್‌ಗಳು ಹಾಗೂ ಅಧಿಕೃತವಾಗಿ ಕಾಣುವ ಅಂಚೆ ಚೀಟಿಗಳನ್ನು ಕೂಡ ತಯಾರಿಸಿಕೊಂಡಿದ್ದರು.

“ನಾವು ಉತ್ತಮವಾಗಿ ಸಂಘಟಿಸಲಾದ ವಂಚನಾ ಜಾಲವನ್ನು ಭೇದಿಸಿದ್ದೇವೆ. ಆರೋಪಿಗಳು ಪೊಲೀಸ್ ಇಲಾಖೆಯ ಚಿಹ್ನೆಗಳು ಮತ್ತು ಸಚಿವಾಲಯದ ನಕಲಿ ದಾಖಲೆಗಳನ್ನು ದುರುಪಯೋಗ ಪಡಿಸಿ, ಸಾರ್ವಜನಿಕರಿಂದ ಹಣ ದೋಚುತ್ತಿದ್ದರು. ದಾಳಿಯ ವೇಳೆ ಆರು ಮಂದಿ ಶಂಕಿತರನ್ನು ಬಂಧಿಸಿದ್ದೇವೆ. ನಕಲಿ ಗುರುತಿನ ಚೀಟಿಗಳು, ಸಚಿವಾಲಯದ ಪ್ರಮಾಣ ಪತ್ರಗಳು, ಚೆಕ್‌ಬುಕ್‌ಗಳು, ಎಟಿಎಂ ಕಾರ್ಡ್‌ಗಳು, ವಿಸಿಟಿಂಗ್ ಕಾರ್ಡ್‌ಗಳು, ಸೈನ್‌ಬೋರ್ಡ್‌ಗಳು, ಮೊಬೈಲ್‌ಗಳು ಹಾಗೂ ರೂ.42,000 ನಗದು ಸೇರಿ ಹಲವು ಪುರಾವೆಗಳನ್ನು ವಶಪಡಿಸಿಕೊಂಡಿದ್ದೇವೆ” ಎಂದು ಸೆಂಟ್ರಲ್ ನೋಯ್ಡಾದ ಡಿಸಿಪಿ ಶಕ್ತಿ ಮೋಹನ್ ಅವಸ್ಥಿ ತಿಳಿಸಿದ್ದಾರೆ.

error: Content is protected !!